ಬೆಂಗಳೂರು:ಭಕ್ತಾದಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಅನ್ಲೈನ್ನಲ್ಲೆ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡಿಕೊಳ್ಳುವ ರೀತಿ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಎಲ್ಲ ದೇವಾಲಯದ ಆವರಣಗಳನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.
A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಕಡ್ಡಾಯ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.
ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿಸಿ ತೆರವು ಮಾಡಿಸಿ, ದೇವಸ್ಥಾನ ಸುಪರ್ದಿಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಾಶಿ, ಯಾತ್ರೆ, ಮಾನಸ ಸರೋವರ, ಚಾರ್ ಧಾಮ್ ಮತ್ತು ಭಾರತ್ ಗೌರವ್ ಕಾಶಿ ಯಾತ್ರೆಗೆ ಸಹಾಯ ಆಗಲು ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದರು.ದೇವಸ್ಥಾನದಲ್ಲಿ ಮಹಿಳಾ ಅರ್ಚಕರನ್ನ ನೇಮಕ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಯಾರಾದರೂ ಅರ್ಜಿ ಹಾಕಿದರೆ ನೇಮಕ ಮಾಡುವುದಾಗಿ ತಿಳಿಸಿದರು.