ಭಟ್ಕಳ: ಚಲಿಸುತ್ತಿದ್ದ ರೈಲನ್ನು ಏರಲು ಹೋದ ಪ್ರಯಾಣಿಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ರೈಲಿಗೆ ಸಿಲುಕುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೊಂಕಣ ರೈಲ್ವೆ ಸಿಬ್ಬಂದಿ ತಕ್ಷಣವೇ ಅವರನ್ನು ಹಿಡಿದು ಅಪಾಯದಿಂದ ಪಾರು ಮಾಡಿದ್ದಾರೆ. ರೈಲ್ವೆ ನಿಲ್ದಾಣದ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಗೋವಾದ ಮಡಗಾಂವ್‌ನಿಂದ ಎರ್ನಾಕುಲಂ ಕಡೆಗೆ ಸಾಗುತಿದ್ದ ರೈಲು ಸಂಖ್ಯೆ 10215 ಭಟ್ಕಳದಲ್ಲಿ ನಿಲುಗಡೆಯಾಗಿತ್ತು. ರೈಲು ಪುನಃ ಹೊರಡುವಾಗ ಓರ್ವ ಪ್ರಯಾಣಿಕ ರೈಲು ಏರುವಾಗ ಎಡವಿದಂತೆ ತೋರಿದರು. ಇದನ್ನು ಅರಿತ ಕೊಂಕಣ ರೈಲ್ವೆ ಪಾಯಿಂಟ್ಸಮನ್ ಮಣ್ಕುಳಿಯ ಯೋಗೇಶ ನಾಯ್ಕ ಅವರನ್ನು ರೈಲು ಏರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಅವರ ಒಂದು ಕಾಲು ರೈಲಿನಿಂದ ಕೆಳಗೆ ಜಾರಿತು. ರೈಲಿನ ಕೆಳಗಡೆ ಸಿಲುಕುವಷ್ಟರಲ್ಲಿ ಯೋಗೇಶ ನಾಯ್ಕ ತಮ್ಮ ಸಮಯಪ್ರಜ್ಞೆಯಿಂದ ಅವರನ್ನು ಪ್ಲಾಟ್‌ಫಾರಂ ಕಡೆಗೆ ಎಳೆದು ಜೀವ ರಕ್ಷಿಸಿದ್ದಾರೆ. ನಂತರ ರೈಲು ನಿಲುಗಡೆಗೆ ಸಿಗ್ನಲ್ ತೋರಿಸಿ ಪ್ರಯಾಣಿಕನನ್ನು ಪುನಃ ರೈಲು ಹತ್ತಿಸಿ ಕಳುಹಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಪಾಯಕಾರಿ ಸನ್ನಿವೇಶದಲ್ಲಿ ಸಮಯಪ್ರಜ್ಞೆಯಿಂದ ತನ್ನನ್ನು ಪಾರು ಮಾಡಿದ ಯೋಗೇಶ ನಾಯ್ಕ ಅವರಿಗೆ ಪ್ರಯಾಣಿಕ ಧನ್ಯವಾದ ತಿಳಿಸಿದ್ದಾರೆ.