ಚಿತ್ರದುರ್ಗ: ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ಈ ಭಾಗದ ರೈತರ ಜೀವನಾಡಿಯಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಷ್ಟಿçÃಯ ಮಹತ್ವದ ಯೋಜನೆಯನ್ನಾಗಿ ಘೋಷಿಸಿ ರೂ.5300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು.
ಕೊಟ್ಟ ಆಶ್ವಾಸನೆಯನ್ನು ಉಳಿಸಿಕೊಂಡು ಶೀಘ್ರ ರೂ.5300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಒತ್ತಾಯಿಸಿದರು.
ನಗರದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಇತ್ತೀಚಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಗರಕ್ಕೆ ಭೇಟಿ ನೀಡಿದಾಗ, ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಳಿದ ತಾಂತ್ರಿಕ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಉತ್ತರ ನೀಡಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಆದರೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಅವರು ಕಳೆದ ಜೂನ್ 29 ರಂದು ನವದೆಹಲಿಯ ಜಲಶಕ್ತಿ ಮಂತ್ರಾಲಯದ ರಾಜ್ಯ ಯೋಜನೆಗಳ ಆಯುಕ್ತರೊಂದಿಗೆ ಚರ್ಚಿಸಿದಾಗ, ಯೋಜನೆಯಲ್ಲಿ ಯಾವುದೇ ಸಮಸ್ಯೆ ಹಾಗೂ ತಾಂತ್ರಿಕ ಅಸಮರ್ಪಕತೆ ಇಲ್ಲ ಎಂಬುದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ಯಾವುದೇ ಆಕ್ಷೇಪಣೆ ಅಥವಾ ತಾಂತ್ರಿಕ ಅಸಮರ್ಪಕತೆಗಳ ಕುರಿತು ರಾಜ್ಯ ಸರ್ಕಾರಕ್ಕೂ ಯಾವುದೇ ಪತ್ರ ಸ್ವೀಕೃತವಾಗಿಲ್ಲ, ಆದಾಗ್ಯೂ 5300 ಕೋಟಿ ರೂ. ನಲ್ಲಿ ಯಾವುದೇ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಸಚಿವ ಡಿ.ಸುಧಾಕರ್ ಸ್ಪಷ್ಟ ಪಡಿಸಿದರು.