ಬ್ರಿಟನ್‌ನ ರಾಜಮನೆತನಕ್ಕೆ ಕ್ಯಾನ್ಸರ್ ಮಹಾಮಾರಿ ವಕ್ಕರಿಸಿಕೊಂಡಂತಿದೆ. ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಇದನ್ನು ಸ್ವತಃ ಕೇಟ್ ಮಿಡಲ್ಟನ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಸದ್ಯ ಕೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಕೀಮೋಥೆರಪಿಗೆ ಒಳಗಾಗುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಅವರ ಆರೈಕೆ ಮಾಡುತ್ತಿದ್ದಾರೆ. ಕ್ಯಾನ್ಸರ್ ಕುರಿತಂತೆ ಕೇಟ್ ಹರಿಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜಕುಮಾರಿಗೆ ಭಯಾನಕ ಕಾಯಿಲೆ ಇರುವ ಸುದ್ದಿ ಕೇಳಿ ಬ್ರಿಟನ್ ಜನತೆ ಆಘಾತಕ್ಕೊಳಗಾಗಿದ್ದಾರೆ.
ಆಕೆ ಶೀಘ್ರ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತಿದ್ದಾರೆ. ಕೇಟ್ ಮಿಡಲ್ಟನ್ ಅವರ ವಿಡಿಯೋ ದಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಸದ್ಯ ತಾನು ಚೆನ್ನಾಗಿದ್ದೇನೆ, ಶೀಘ್ರ ಗುಣಮುಖಳಾಗುವಂತಹ ವಿಷಯಗಳ ಮೇಲೆ ಗಮನಹರಿಸುತ್ತಿದ್ದು, ಪ್ರತಿದಿನ ಬಲಶಾಲಿಯಾಗುತ್ತಿದ್ದೇನೆ ಎಂದು ಸ್ವತಃ ಕೇಟ್ ಹೇಳಿಕೊಂಡಿದ್ದಾಳೆ. ಕಳೆದ ಕೆಲ ವಾರಗಳಿಂದ ಕೇಟ್ ಮಿಡಲ್ಟನ್ ಇರುವಿಕೆ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳೆದ್ದಿದ್ದವು. ಅವರನ್ನು ಶಸ್ತ್ರಚಿಕಿತ್ಸೆಗಾಗಿ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಸಮಯದಲ್ಲಿ ಕೂಡ ಕೇಟ್ ಹೆಚ್ಚು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.