ಬೆಂಗಳೂರು :ಕಾಂಗ್ರೆಸ್ ಪಕ್ಷದ ಬಕಾಸುರ ಮತ್ತು ಭಸ್ಮಾಸುರನ ವರ್ತನೆಗೆ ರಾಜ್ಯದ ಜನತೆ ಪಾಠ ಕಲಿಸಬೇಕು. ಭಸ್ಮಾಸುರ ಹಾಗೂ ಬಕಾಸುರನಂತೆ ವರ್ತನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ನಾಳೆ ನಡೆಯುವ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮನವಿ ಮಾಡಿದರು.
ನಗರದ ವಿಧಾನಸೌಧ ಕೆಂಗಲ್ ದ್ವಾರದ ಬಳಿ ಇಂದು ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿನಲ್ಲಿ ನಮ್ಮ ಭೂಮಿ ಕಿತ್ತುಕೊಳ್ಳುವ ಕೆಲಸ, ರೈತರ, ದಲಿತರ ಭೂಮಿ ಕಿತ್ತುಕೊಳ್ಳುವ ಕೆಲಸ ನಡೆಯವುದನ್ನು ನಾವು ನೋಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಆಧುನಿಕ ಭಸ್ಮಾಸುರನಂತೆ ವರ್ತಿಸುತ್ತಿದೆ. ಬಕಾಸುರ ಮತ್ತು ಭಸ್ಮಾಸುರ ಎರಡೂ ಸೇರಿದರೆ ಏನಾಗುತ್ತದೋ ಅದು ಕಾಂಗ್ರೆಸ್ ಆಗಿದೆ ಎಂದು ಆರೋಪಿಸಿದರು.
ಕರ್ನಾಟಕ ಸರಕಾರದ ಸಚಿವ ಜಮೀರ್ ಅಹಮದ್ ಅವರು ದೇವೇಗೌಡರ ಕುಟುಂಬವನ್ನು ಒಂದೊಂದು ರೂಪಾಯಿಯೂ ಹಾಕಿ ಕೊಂಡುಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಮಾತು ಅಧಿಕಾರದ ಮದ, ಹಣದ ಮದ ತಲೆಗೇರಿದರೆ ಮನುಷ್ಯ ಹುಚ್ಚುಚ್ಚಾಗಿ ಆಡುತ್ತಾನಂತೆ ಎಂಬಂತಿದೆ. ಇವರಿಗೆ ಅಧಿಕಾರ- ಹಣದ ಮದ ಆ ರೀತಿ ಹುಚ್ಚುಚ್ಚು ಮಾತುಗಳನ್ನು ಆಡಿಸಿದೆ ಎಂದು ಅನಿಸುತ್ತದೆ ಎಂದು ವಿಶ್ಲೇಷಿಸಿದರು.
ಈ ಹುಚ್ಚುಗಳನ್ನು ಜನರು ಮಾತ್ರ ಇಳಿಸಲು ಸಾಧ್ಯ ಎಂದ ಅವರು, ಜಮೀರ್ ಅಹಮದ್ ಅವರ ಬಳಿ ಲೂಟಿ ಹೊಡೆದ ಹಣವಿದ್ದು, ಒಕ್ಕಲಿಗರು, ಹಿಂದೂಗಳನ್ನು ಕೊಂಡುಕೊಳ್ಳಬಹುದೆಂಬ ಸೊಕ್ಕು ಮೂಡಿಸಿದೆ. ಲೂಟಿ ಹೊಡೆದ ದುಡ್ಡಿರುವವರು ಮಾತ್ರ ಇಂಥ ದುರಹಂಕಾರದ ಮಾತನಾಡುತ್ತಾರೆ. ಲೂಟಿ ಹೊಡೆದ ಹಣ ಬಹಳ ಇದ್ದಂತಿದೆ. ಈ ಸೊಕ್ಕನ್ನು ಇಳಿಸಬೇಕು; ಪ್ರಜಾಪ್ರಭುತ್ವದಲ್ಲಿ ಜಮೀರ್ ಅಹಮದ್ ಥರದವರು ಅಪಸವ್ಯ ಇದ್ದಂತೆ. ಅವರ ಅವಸವ್ಯವನ್ನು ದೂರ ಹಾಕಲು ಒಂದೊಂದು ಮಾತಿಗೂ ಜನರು ಉತ್ತರ ನೀಡುವ ಮಾದರಿಯಲ್ಲಿ ಮತ ಹಾಕಬೇಕೆಂದು ವಿನಂತಿಸಿದರು.
ಜಮೀರ್ ಸೊಕ್ಕಿಗೆ ಉತ್ತರ ಕೊಡಲು ಮನವಿ
ಜಮೀರ್ ಅವರು ವರ್ಣಭೇದದ ಮಾತನಾಡಿದ್ದಾರೆ. ನಮ್ಮ ಕೃಷ್ಣ, ರಾಮ, ಪರಶಿವನಂತ ದೇವಾನುದೇವತೆಗಳು ಕೃಷ್ಣವರ್ಣದಲ್ಲೇ ಭೂಮಿಗೆ ಬಂದವರು. ಈ 3 ಜನರೂ ಕೃಷ್ಣವರ್ಣದಲ್ಲೇ ದರ್ಶನ ಕೊಟ್ಟು ನಾನೇ ಕಪ್ಪು, ಉಳಿದವರನ್ನು ಕಪ್ಪೆಂದು ಯಾಕೆ ಆಡಿಕೊಳ್ಳುತ್ತೀಯ ಎಂದು ಅವರು ತಿಳಿಸಿದ್ದಾರೆ. ನಮ್ಮ ಭಗವಂತನೇ ಕೃಷ್ಣವರ್ಣ. ಜಮೀರ್ ಮಾಡಿದ ಅಪಮಾನ ಅವರ ಸೊಕ್ಕಿನ ಪ್ರದರ್ಶನ. ಆ ಸೊಕ್ಕಿಗೆ ಉತ್ತರ ಕೊಡಿ ಎಂದು ಮನವಿಯನ್ನು ಜನತೆಯ ಮುಂದಿಟ್ಟರು.
ಮುಖ್ಯಮಂತ್ರಿಗಳೇ, ನಿಮಗೆ ಕಿಂಚಿತ್ತಾದರೂ ಅವರ ಮಾತು ತಪ್ಪೆಂದು ಅನಿಸಿದರೆ ಜಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.