ನವದೆಹಲಿ: “ದೆಹಲಿ”ಯು ಅಕ್ಟೋಬರ್ 1, 2022 ರಿಂದ ಸೆಪ್ಟೆಂಬರ್ 30, 2023 ರವರೆಗೆ ದೇಶದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ ಡೇಟಾವನ್ನು ವಿಶ್ಲೇಷಿಸಿದ ಇತ್ತೀಚಿನ ವರದಿ ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ, ಅ.1, 2022 ಮತ್ತು ಸೆ.30, 2023 ರ ನಡುವೆ ದೆಹಲಿಯು ವಾಯು ಮಾಲಿನ್ಯದ ವಿಷಯದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ.
ಪಾಟ್ನಾ 2ನೇ ಅತಿ ಹೆಚ್ಚು ಮಾಲಿನ್ಯದ ನಗರವಾಗಿದೆ, ನಂತರ ಮುಜಾಫರ್‌ಪುರ, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್, ಮೀರತ್, ನಲ್ಬರಿ, ಅಸನ್ಸೋಲ್ ಮತ್ತು ಗ್ವಾಲಿಯರ್ ನಂತರದ ಸ್ಥಾನಗಳಲ್ಲಿವೆ. ವಾಯುಮಾಲಿನ್ಯವನ್ನು ಅಂದಾಜು ಮಾಡುವ ಪಿಎಂ2.5 ಸಾಂದ್ರತೆಯು ಪ್ರತಿ ಘನ ಮೀಟರ್ ಗೆ 100. ಮೈಕ್ರೋಗ್ರಾಂ ನಷ್ಟಿದೆ. ಅಂದರೆ ಸರ್ಕಾರ ನಿಗದಿ ಮಾಡಿರುವ ಸುರಕ್ಷಿತ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ಲೇಷಣೆಯೊಂದು ಹೇಳಿದೆ. ಈ ಮಟ್ಟದ ಮಾಲಿನ್ಯ ಹಾಗೇ ಉಳಿದರೆ ಇಲ್ಲಿನ ನಿವಾಸಿಗಳ ಆಯಸ್ಸು 11.9 ವರ್ಷ ಕಡಿಮೆಯಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.