ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇಂಡಿಯಾ ಯೋಜನೆಯನ್ನು ಶ್ಲಾಘಿಸಿದ್ದಾರೆ. ದೇಶೀಯವಾಗಿ ತಯಾರಿಸಿದ ಉತ್ಪನ್ನಗಳ ಮಹತ್ವವನ್ನು ಮೋದಿ ಒತ್ತಿ ಹೇಳಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಭಾರತ ಸಕರಾತ್ಮಕ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎಂದು ಪುಟಿನ್ ಹೇಳಿದ್ದಾರೆ.
ಪುಟಿನ್ ಹೇಳಿದ್ದೇನು?
8ನೇ ಈಸ್ಟರ್ನ್ ಎಕಾನಮಿಕ್ ಫಾರಂ(EEF)ನಲ್ಲಿ ಮಾತನಾಡಿದ ಅವರು, ಈ ಹಿಂದೆ ನಾವು ದೇಶೀಯವಾಗಿ ತಯಾರಿಸಿದ ಕಾರು ಹೊಂದಿರಲಿಲ್ಲ. ಆದರೆ ಈಗ ತಯಾರಿಸುತ್ತಿದ್ದೇವೆ. ನಾವು ಕೆಲವೊಂದು ವಿಚಾರದಲ್ಲಿ ನಮ್ಮ ಪಾಲುದಾರ ದೇಶಗಳ ನೀತಿಯನ್ನು ಅನುಸರಿಸಬೇಕು. ಉದಾಹರಣೆಗೆ ಭಾರತ. ಭಾರತ ಇದೀಗ ದೇಶೀಯ ನಿರ್ಮಿತ ವಸ್ತುಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಮೇಕ್ ಇಂಡಿಯಾ ಯೋಜನೆಯನ್ನು ಪ್ರೋತ್ಸಾಹಿಸಲು ಮೋದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪುಟಿನ್ ಮೆಚ್ಚುಗೆ ಸೂಚಿಸಿದ್ದಾರೆ.
ನಮ್ಮಲ್ಲಿ ದೇಶೀಯವಾಗಿ ತಯಾರಾದ ವಾಹನಗಳಿವೆ. ಅವು ಕಾರ್ಯಕ್ಷಮತೆಯಲ್ಲಿ ಉತ್ತಮವಾಗಿದ್ದು, ಅವನ್ನು ಹೆಚ್ಚಾಗಿ ಬಳಸಬೇಕು. ಇದು ಡಬ್ಲ್ಯುಟಿಒ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ. ಅಧಿಕಾರಿಗಳು ದೇಶೀಯ ನಿರ್ಮಿತ ವಾಹನ ಉಪಯೋಗಿಸುವಂತಾಗಬೇಕು ಎಂದು ಅಬಿಪ್ರಾಯಪಟ್ಟರು.
ಇತ್ತೀಚೆಗೆ ದಿಲ್ಲಿಯಲ್ಲಿ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ನಿರ್ಣಯವಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಎಕಾನಾಮಿಕ್ ಕಾರಿಡಾರ್ (IMEC) ಬಗ್ಗೆಯೂ ಮಾತನಾಡಿದ ಪುಟಿನ್, ಇದರಿಂದ ರಷ್ಯಾಕ್ಕೆ ಯಾವ ರೀತಿಯಿಂದಲೂ ತೊಂದರೆ ಇಲ್ಲ ಎಂದು ಪ್ರತಿಪಾದಿಸಿದರು.
ನನ್ನ ಪ್ರಕಾರ ಈ ಒಪ್ಪಂದಿಂದ ನಮ್ಮ ದೇಶಕ್ಕೆ ಅನುಕೂಲವೇ ಆಗಲಿದೆ. ಇದು ಲಾಜಿಸ್ಟಿಕ್ ಅಭಿವೃದ್ದಿಪಡಿಸಲು ನೆರವಾಗಲಿದೆ. ಈ ಯೋಜನೆಗಾಗಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ ಎಂದು ಪುಟಿನ್ ತಿಳಿಸಿದ್ದಾರೆ.