ಕಾಲಿವುಡ್ ಸ್ಟಾರ್ ನಟ ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಭಾರತೀಯ ಸೇನೆ ಕುರಿತಾದ ಈ ಸಿನಿಮಾ ಇದೇ ಅ.31ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಇದರ ನಡುವೆ ಸಾಯಿ ಪಲ್ಲವಿ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಾಯಿ ಪಲ್ಲವಿ 2020ರಲ್ಲಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿದ್ದರು. ನಕ್ಸಲರ ಬಗ್ಗೆ ಆ್ಯಂಕರ್ ಕೇಳಿದ ಪ್ರಶ್ನೆಗೆ ಸಾಯಿ ಪಲ್ಲವಿ ನೀಡಿದ ಉತ್ತರ ವಿವಾದಕ್ಕೀಡಾಗಿತ್ತು. ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು ಅಂದರೆ, ಭಾರತೀಯ ಸೇನೆಯು ಪಾಕಿಸ್ತಾನಿ ಜನರನ್ನು ಭಯೋತ್ಪಾದಕರಂತೆ ನೋಡುತ್ತದೆ ಮತ್ತು ಪಾಕಿಸ್ತಾನದ ಜನರು ಕೂಡ ಅದೇ ರೀತಿ ನೋಡುತ್ತಾರೆ.
ಯಾವುದೇ ರೀತಿಯ ದಾಳಿ ಸರಿಯಲ್ಲ ಎಂದು ಹೇಳಿದ್ದರು. ನೆಟ್ಟಿಗರೊಬ್ಬರು ಹಳೆಯ ವಿಡಿಯೋ ತುಣುಕನ್ನು ಮತ್ತೆ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ಹಿಂದೆ ಕಾಶ್ಮೀರಿ ಫೈಲ್ಸ್ ಸಿನಿಮಾ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ, ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ಗೋವಿನ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗುರಿಯಾಗಿತ್ತು.