ದೇಶದ ಹೆಸರನ್ನು ‘ಇಂಡಿಯಾ’ ಎನ್ನುವ ಬದಲು ‘ಭಾರತ’ ಎಂದು ಬದಲಿಸಲಾಗುತ್ತದೆ ಎಂಬ ಸುದ್ದಿ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ.
ಭರತ, ಭರತ ಖಂಡ, ಭಾರತ! ಇವು ಮೂರು ನಮ್ಮ ದೇಶದ ಮೂಲ ಹೆಸರುಗಳು. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವನ್ನು ಆಂಗ್ಲ ಭಾಷೆಯಲ್ಲಿ‘ಇಂಡಿಯಾ’ ಎಂದು ಕರೆಯಲಾಯಿತು. ಸಂವಿಧಾನದ ಕಲಂ 1ರಲ್ಲಿ‘ಇಂಡಿಯಾ’, ‘ಭಾರತ’ ಎಂಬ ಎರಡು ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಸಾವಿರಾರು ವರ್ಷಗಳ ಕಾಲ ‘ಭರತ’, ‘ಭಾರತ’ ಎಂದು ಕರೆಯಲ್ಪಡುತ್ತಿದ್ದ ಭೂಮಿಗೆ ಆಂಗ್ಲರೇಕೆ ‘ಇಂಡಿಯಾ’ ಎಂದು ಹೆಸರಿಟ್ಟರು? ಅದನ್ನೇಕೆ ಕಳೆದ 76 ವರ್ಷದಿಂದ ಉಳಿಸಿಕೊಂಡು ಬರಲಾಗಿದೆ ಎಂಬುದು ದೊಡ್ಡ ಚರ್ಚೆಯ ವಿಚಾರವಾಗಿದೆ.
‘ಭಾರತ’ ಎಂಬ ಪದ ಸಂಸ್ಕೃತದ ‘ಭ್ರು’ ಎಂಬ ಪದದಿಂದ ಉದ್ಭವವಾಗಿದೆ. ಅಂದರೆ ‘ನಿರ್ವಹಿಸುವುದು’, ‘ರಕ್ಷಿಸುವುದು’ ಎಂದರ್ಥ. ಈ ನೆಲವನ್ನು ರಕ್ಷಣೆ ಮಾಡುತ್ತಿದ್ದ ರಾಜನನ್ನು ‘ಭರತ’ ಎಂದು ಆ ಭೂಮಿಯನ್ನು ‘ಭರತ ವರ್ಷ’ ಎಂದು ಕರೆಯಲಾಗುತ್ತಿತ್ತು ಎಂದು ಪುರಾಣದಲ್ಲಿಉಲ್ಲೇಖಿಸಲಾಗಿದೆ.
‘ಭಾರತ’ ಹೆಸರು ಬಂದಿದ್ಹೇಗೆ?
- ನಮ್ಮ ದೇಶ ‘ಇಂಡಿಯಾ’ ಎಂದು ಎಷ್ಟು ಪ್ರಸಿದ್ಧವೋ ‘ಭಾರತ’ ಎಂದು ಅದಕ್ಕಿಂತ ಪ್ರಸಿದ್ಧಿ ಪಡೆದಿದೆ. ‘ಭಾರತ’ ಎಂಬ ಪದವೇ ಒಂದು ರೋಮಾಂಚನ. ಈ ಹೆಸರು ಉದ್ಭವಿಸಿದ್ದ ಪುರಾಣ ಕಾಲದ ಪಾತ್ರಗಳ ಪ್ರಭಾವದಿಂದ ಎನ್ನುವುದು ಬಹುದೊಡ್ಡ ನಂಬಿಕೆ.
- ಭಾರತ ಎಂಬ ಹೆಸರು ‘ಭರತ ವರ್ಷ‘ ಎಂಬ ಹೆಸರಿನಿಂದ ಉಗಮಗೊಂಡಿದೆ. ಪೌರಾಣಿಕ ಆಕರಗಳಿಂದಲೂ ಭಾರತ ಹೆಸರು ಬೆಳೆದುಬಂದಿದೆ. ವೃಷಭದೇವನ ಮಗ ಭರತ ಚಕ್ರವರ್ತಿ ಅಥವಾ ದುಶ್ಯಂತ ಮಹಾರಾಜನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ‘ಭಾರತ’ ಹೆಸರು ಬಂದಿದೆ ಎಂದೂ ಕಲ್ಪಿಸಲಾಗುತ್ತದೆ.
- ‘ಇಂಡಿಯಾ‘ ಎಂಬ ಹೆಸರು ಸಿಂಧೂ ಪದರಿಂದ ಹುಟ್ಟಿ ಪರ್ಷಿಯನ್ ರೂಪಾಂತರ ಪಡೆದು, ‘ಇಂಡಸ್‘ ಎಂಬ ಪದದಿಂದ ಆವಿರ್ಭವಿಸಿದೆ ಎಂದು ಹೇಳಲಾಗುತ್ತದೆ.
- ಪುರಾಣದಲ್ಲಿ ನಮ್ಮ ದೇಶಕ್ಕೆ ನಾನಾ ಹೆಸರುಗಳಿಂದ ಗುರುತಿಸಿರುವುದನ್ನು ಗಮನಿಸಬಹುದು. ಜಂಬೂದ್ವೀಪ, ಹಿಮವರ್ಷ, ಅಜನಾಭವರ್ಷ, ಆರ್ಯವರ್ಷ, ಹಿಂದೂ, ಹಿಂದೂಸ್ತಾನ್, ಇಂಡಿಯಾ ಎಂಬ ಹೆಸರುಗಳಿವೆ. ಅದರಲ್ಲಿ‘ಭಾರತ’, ‘ಇಂಡಿಯಾ’ ಹೆಸರುಗಳು ಹೆಚ್ಚು ಪ್ರಸಿದ್ಧಿ.
- ವಿಷ್ಣು ಪುರಾಣದಲ್ಲಿ ‘ಭಾರತ’ದ ಹೆಸರಿನ ಬಗ್ಗೆ ಪ್ರಸ್ತಾಪವಿದೆ. ‘ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೆಶ್ಚೈವಂ ದಕ್ಷಿಣಂ ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರಂ ಸಂತತಿಃ’ ಅಂದರೆ, ‘ದಕ್ಷಿಣದ ಹಿಂದೂ ಮಹಾಸಾಗರದಿಂದ ಉತ್ತರದ ಹಿಮಪರ್ವತಗಳವರೆಗೆ ಹರಡಿರುವ ದೇಶವೇ ಭಾರತ. ಇಲ್ಲಿರುವವರು ಭರತನ ವಂಶಜರು,’ ಎಂದು ಪುರಾಣದಲ್ಲಿ ಹೇಳಲಾಗಿದೆ.