ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ (71) ಬುಧವಾರ ನಿಧನರಾದರು. ಅವರು ದೀರ್ಘಕಾಲದಿಂದ ರಕ್ತದ ಕ್ಯಾನ್ಸರ್ನಿಂದ ಬಳಲಿದ್ದರು.
ಲಂಡನ್ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೋದ ತಿಂಗಳು ಭಾರತಕ್ಕೆ ಮರಳಿದ್ದರು. ಅವರ ಚಿಕಿತ್ಸೆಗಾಗಿ ಈಚೆಗಷ್ಟೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 1 ಕೋಟಿ ನೆರವು ನೀಡಿತ್ತು.
ಬಲಗೈ ಬ್ಯಾಟರ್ ಆಗಿದ್ದ ಗಾಯಕವಾಡ್ ಅವರು ಭಾರತ ತಂಡದಲ್ಲಿ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳಲ್ಲಿ ಆಡಿದ್ದರು. 206 ಪ್ರಥಮ ದರ್ಜೆ ಪಂದ್ಯಗಳಲ್ಲಿಯೂ ಆಡಿದ್ದರು. 1975 ರಿಂದ 1987ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಅಂಶುಮನ್ ಅವರು ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿ, ಬರೋಡಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯರಾಗಿದ್ದರು ಎಂಬುದು ವಿಶೇಷ.!