ಶಿಮ್ಲಾ : ಧರ್ಮಶಾಲಾದಲ್ಲಿ ನಡೆದ ಭಾರತ ನ್ಯೂಜಿಲೆಂಡ್ ನಡುವೆ ನಡೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಭರ್ಜರಿ ಗೆಲುವು ಸಾಧಸಿದೆ. ಈ ಗೆಲುವಿನಿಂದ ಭಾರತ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಕೆಯಾಗಿದೆ. ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಹಾಗೂ ಮಹಮ್ಮದ ಶಮಿ ಮಾರಕ ಬೌಲಿಂಗ್‌ಗೆ ನ್ಯೂಜಿಲೆಂಡ್ ಪಡೆ ಭಾರತದ ಎದುರು ಸೋಲನ್ನು ಒಪ್ಪಿಕೊಂಡಿತು. ಇನ್ನು, ಈ ಪಂದ್ಯದ ವೇಳೆ ಅಚ್ಚರಿ ನಡೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಘಟಾನುಘಟಿ ನಾಯಕರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. ಹೌದು, ತಮ್ಮ ರಾಜಕೀಯ ಪೈಪೋಟಿಯನ್ನು ಬದಿಗಿಟ್ಟು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾನುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ವಿಶ್ವಕಪ್ ಪಂದ್ಯವನ್ನು ಆನಂದಿಸಿದರು. ಬಿಜೆಪಿ ನಾಯಕ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್ ನಾಯಕ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ರಾಜ್ಯ ಕೈಗಾರಿಕಾ ಸಚಿವ ಹರ್ಷವರ್ಧನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ಮೈದಾನದಲ್ಲಿ ಒಟ್ಟಿಗೆ ಕೂತು ಪಂದ್ಯವನ್ನು ವೀಕ್ಷಿಸಿದ್ದಾರೆ. ಸುಖು ಅವರು ಜೆ ಪಿ ನಡ್ಡಾ ಮತ್ತು ಅನುರಾಗ್ ಠಾಕೂರ್ ನಡುವೆ ಕುಳಿತಿದ್ದರು. ಅನುರಾಗ್ ಠಾಕೂರ್ ಕೂಡ ವಿವಿಐಪಿ ಸ್ಟ್ಯಾಂಡ್‌ಗಳಲ್ಲಿ ಒಟ್ಟಿಗೆ ಕುಳಿತಿದ್ದ ನಾಯಕರ ಫೋಟೋಗಳು ವೈರಲ್ ಆಗಿವೆ.