ನಾಗ್ಪುರ : ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಶನಿವಾರ ಮುಂಜಾನೆ ನಡೆದ ಕ್ವಾಲಿಸ್ ಕಾರು ಮತ್ತು ಟ್ರಕ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮತ್ತೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಮದುವೆ ಸಮಾರಂಭದಿಂದ ಹಿಂತಿರುಗುತ್ತಿರುವಾಗ ಈ ಘೋರ ದುರಂತ ಸಂಭವಿಸಿದೆ. ಮಯೂರ್ ಇಂಗಳೆ (22), ವೈಭವ್ ಚಿಖಲೆ (32), ಸುಧಾಕರ್ ಮಾನಕರ್ (42), ವಿಠ್ಠಲ್ ತೋಟೆ (45), ಅಜಯ್ ಚಿಖಲೆ (40) ಮತ್ತು ರಮೇಶ ಹಲೊಂಡೆ ಮೃತದುರ್ದೈವಿಗಳಾಗಿದ್ದಾರೆ. ಮತ್ತೋರ್ವ ಪ್ರಯಾಣಿಕ ಜಗದೀಶ್ ಧೋನ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲರೂ ನಾಗ್ಪುರ ಜಿಲ್ಲೆಯ ಕಟೋಲ್ ತಾಲೂಕಿನ ಮೆಂಡಿಪಥರ್ ಗ್ರಾಮದವರು ಎಂದು ತಿಳಿದು ಬಂದಿದೆ.ನಾಗ್ಪುರದಿಂದ ಕಟೋಲ್ ಕಡೆಗೆ ಹೋಗುತ್ತಿದ್ದಾಗ ಸೋಂಖಾಂಬ್ ಮತ್ತು ತಾರಾಬೋಡಿ ಗ್ರಾಮಗಳ ಮಧ್ಯೆ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿದ್ದಾರೆ. ಈ ಘಟನೆ ಸಂಬಂಧ ಟ್ರಕ್ ಚಾಲಕನನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.