ಭೋವಿ ಸಮಾಜವನ್ನು ಸಾಮಾಜಿಕವಾಗಿ ಸಮರ್ಥಗೊಳಿಸಲು ಸರಕಾರ ಬದ್ಧ: ಸಿದ್ದರಾಮಯ್ಯ.!

 

ಚಿತ್ರದುರ್ಗ : ಕುಲ ಕಸುಬನ್ನೆ ನಂಬಿ ಬದುಕುತ್ತಿರುವ ಭೋವಿ ಸಮಾಜವನ್ನು ಸಾಮಾಜಿಕವಾಗಿ ಸಮರ್ಥಗೊಳಿಸಲು ಕಾನೂನು ಅಡಿಯಲ್ಲೆ ಏನೆಲ್ಲಾ ಅವಕಾಶವಿದೆಯೋ ಅದನ್ನೆಲ್ಲಾ ಮಾಡುತ್ತೇನೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ ಉದ್ಗಾಟಿಸಿ ಮಾತನಾಡಿದರು.

Advertisement

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾಧಿಪತಿಗಳಾಗಿ 25 ವರ್ಷಗಳನ್ನು ಪೂರೈಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನೂರು ಕಾಲ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಹಿಂದುಳಿದ ಶೋಷಣೆಗೊಳಗಾದ ಭೋವಿ ಸಮಾಜಕ್ಕೆ ಗುರಿ ಇರಬೇಕು. ಮಾರ್ಗದರ್ಶನ ಮಾಡಲು ಗುರು ಇರಬೇಕು. ಅಂಬೇಡ್ಕರ್, ಬಸವಣ್ಣ ಹೇಳಿದಂತೆ ಸಮ ಸಮಾಜ ನಿರ್ಮಾಣವಾಗಬೇಕು. ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಬೇಕಾದರೆ ಮೊದಲು ಅಕ್ಷರವಂತರಾಗಬೇಕು. ಇಲ್ಲದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಸಂವಿಧಾನದಡಿ ಸಿಕ್ಕಿರುವ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಅನ್ಯಾಯ, ಶೋಷಣೆಗೊಳಗಾಗಿರುವ ದುರ್ಬಲ ವರ್ಗದವರಿಗೆ ಸಾಮಾಜಿಕ, ಆರ್ಥಿಕ, ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮೇಲು-ಕೀಳು, ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ ಎನ್ನುವ ತಾರತಮ್ಯ ಅಸಮಾನತೆ ಹೋಗಲಾಡಿಸಲು ಆಗುವುದಿಲ್ಲ. ಅಸಮಾನತೆಗೆ ನಾವು ನೀವುಗಳ್ಯಾರು ಕಾರಣರಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿಯಿಂದ ಅಸಮಾನತೆ ಇನ್ನು ಜೀವಂತವಾಗಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆಯಿರುತ್ತದೋ ಅಲ್ಲಿಯತನಕ ಅಸಮಾನತೆಯಿರುತ್ತದೆ. ವಿದ್ಯೆಯಿಂದ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಮೇಲೆ ಬರಬಹುದು. ಸಂವಿಧಾನದಡಿ ಅಕ್ಷರ ಕಲಿಯಲು ಎಲ್ಲರಿಗೂ ಅವಕಾಶವಿದೆ. ಭೋವಿ ಸಮಾಜದಲ್ಲಿ ಹುಟ್ಟಿದವರು ಉನ್ನತ ಅಧಿಕಾರಿಗಳಾಗಬಹುದು. ದಾಸ್ಯ ಪದ್ದತಿಯಿಂದ ಈಗಲೂ ಅನೇಕರು ಗುಲಾಮಗಿರಿಯಲ್ಲಿದ್ದಾರೆ. ಗುಲಾಮಗಿರಿ ಮನಸ್ಥಿತಿ ಬದಲಾಗಬೇಕಾದರೆ ಶಿಕ್ಷಣವಂತರಾಗಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕೆಂದು ಭೋವಿ ಸಮುದಾಯಕ್ಕೆ ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಬಹುದು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ಸಮಾಜಮುಖಿ ಕೆಲಸಗಳಿಗೆ ಸದಾ ಜೊತೆಯಲ್ಲಿರುತ್ತೇನೆ. ಕುರಿಗಾಹಿಗಳು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಇನ್ನು ಹಿಂದುಳಿದಿದ್ದಾರೆ. ಕುಲ ಕಸುಬಿನಿಂದ ವಿದ್ಯಾವಂತರಾಗಲು ಸಾಧ್ಯವಿಲ್ಲ. ಕಡ್ಡಾಯ ಉಚಿತ ಶಿಕ್ಷಣ ಮೂಲಭೂತ ಹಕ್ಕು. ಎಸ್ಸಿಪಿ. ಟಿಎಸ್ಪಿ. ಕಾಯಿದೆ ಪಾಸ್ ಮಾಡಿದ್ದೇವೆ. 39 ಸಾವಿರದ 121 ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭಿವೃದ್ದಿಗೆ ನಮ್ಮ ಸರ್ಕಾರ ಮೀಸಲಿಟ್ಟಿದೆ. ಇಲ್ಲಿಯವರೆಗೂ ಒಂದು ಲಕ್ಷದ 60 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ದಿಗೆ ಖರ್ಚು ಮಾಡಿದ್ದೇವೆ. ಜನಸಂಖ್ಯೆಗನುಗುಣವಾಗಿ ಹಣ ಖರ್ಚು ಮಾಡಲು ಮೊದಲ ಬಾರಿಗೆ ನಮ್ಮ ಸರ್ಕಾರ ಕಾನೂನು ಮಾಡಿತು. ಭೋವಿ ಅಭಿವೃದ್ದಿ ನಿಗಮ ರಚಿಸಿದ್ದು, ನಾವು, ದೇವಯ್ಯನನ್ನು ಕೆ.ಪಿ.ಎಸ್ಸಿ. ಸದಸ್ಯನಾಗಿ ಮಾಡಿದ್ದೇನೆ. ಭೋವಿ ಅಭಿವೃದ್ದಿ ನಿಗಮವನ್ನು ಭೋವಿ ವಡ್ಡರ ನಿಗಮ ಎಂದು ನಾಮಕರಣ ಮಾಡೋಣ. ಸಿದ್ದರಾಮೇಶ್ವರ ಅಧ್ಯಯನ ಪೀಠ ಮಾಡಲಾಗಿದೆ. ಭೋವಿ ಜನಾಂಗದಿಂದ ವಿಧಾನಪರಿಷತ್ ನಾಮ ನಿರ್ದೇಶನ ಮಾಡಿ, ಭೋವಿ ಅಭಿವೃದ್ದಿ ನಿಗಮಕ್ಕೆ ಅನುದಾನ ಮೀಸಲಿಡಲಾಗುವುದು ಎಂದು ವಾಗ್ದಾನ ಮಾಡಿದರು.

ಮಂತ್ರಾಲಯದ ಸುಬುದೇಂದ್ರ ಸ್ವಾಮೀಜಿ , ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ , ಮಾಜಿ ಸಚಿವ ಅರವಿಂದ ಲಿಂಬಾವಳಿ , ಪುಲಕೇಶಿ ನಗರ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡ ಶಾಸಕ ವಿ. ವೆಂಕಟೇಶ್, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್ ಇವರುಗಳು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರುಗಳಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಕೋಲಾರ ಸಂಸದ ಮಲ್ಲೇಶ್ಬಾಬು, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್ಬಾಬು, ನ್ಯಾಯವಾದಿ ಶಂಕರಪ್ಪ, ನಾರಾಯಣಸ್ವಾಮಿ, ಸೀತಾರಾಮಪ್ಪ ಸೇರಿದಂತೆ ಭೋವಿ ಸಮಾಜದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement