ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ: ಡಿಸಿಎಂ

ಬಿಡದಿ: “ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ, ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಶುಕ್ರವಾರ ಆರಂಭವಾದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

“ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜನತಾ ದಳವನ್ನು ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಲೇವಡಿ ಮಾಡಿದರು.

Advertisement

“ಬಿಜೆಪಿ ಹಾಗೂ ಜೆಡಿಎಸ್ ನವರು ಪಾದಯಾತ್ರೆ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದಾಗ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಿಜೆಪಿ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋಟಿ, ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು? ಈ ಬಗ್ಗೆ ನೀವು ಉತ್ತರ ನೀಡಬೇಕು. ನೀವು ಹೇಳದಿದ್ದರೆ ನಾವು ಹೇಳುತ್ತೇವೆ. ನಾವು ಹೇಳಲು ಇನ್ನು ಒಂದು ವಾರಗಳ ಕಾಲಾವಕಾಶವಿದೆ” ಎಂದು ಹೇಳಿದರು.

“ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯ ವೀರಯ್ಯ ಅವರು 47 ಕೋಟಿ ರೂ. ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಬಿಜೆಪಿ ಹಾಗೂ ಜೆಡಿಎಸ್ ನವರು ಈ ಅಕ್ರಮದ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ? ಈ ಅಕ್ರಮದ ತನಿಖೆಯನ್ನು ಅವರೇ ಯಾಕೆ ತನಿಖೆ ಮಾಡಿಸಲಿಲ್ಲ? ಹೀಗೆ ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ದೊಡ್ಡ ಪಟ್ಟಿಯೇ ನಮ್ಮ ಬಳಿ ಇವೆ” ಎಂದು ತಿಳಿಸಿದರು.

“ಕುಮಾರಣ್ಣ, ಅಶೋಕಣ್ಣಾ, ವಿಜಯೇಂದ್ರ, ಅಶ್ವತ್ಥ್ ನಾರಾಯಣ, ಸಿ.ಟಿ ರವಿ ನೀವುಗಳು ನಮ್ಮ ಈ ಪ್ರಶ್ನೆಗಳಿಗೆ ಪಾದಯಾತ್ರೆ ವೇಳೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

“ಇನ್ನು ವಿಜಯೇಂದ್ರ ನನ್ನ ಮೇಲೆ ಆರೋಪ ಮಾಡುತ್ತಾ, ಈ ಪಾದಯಾತ್ರೆ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಹೇಳಿದ್ದಾನೆ. ಹೇ.. ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ನೀವು ಹೇಳಿದಂತೆ ಕಾಂಗ್ರೆಸ್ ಪಕ್ಷದ ಯಾವನು ಪಾದಯಾತ್ರೆಗೆ ಕುಮ್ಮಕ್ಕು ನೀಡಿದ್ದಾನೆ ಅವನ ಹೆಸರು ಹೇಳು” ಎಂದು ಅಬ್ಬರಿಸಿದರು.

ತನ್ನೊಬ್ಬನ ಅಧಿಕಾರಕ್ಕಾಗಿ ಜೆಡಿಎಸ್ ಪಕ್ಷವನ್ನೇ ತ್ಯಾಗ ಮಾಡಿದ ಕುಮಾರಣ್ಣನಿಗೆ ಸಾಷ್ಟಾಂಗ ನಮಸ್ಕಾರ:

“ಕುಮಾರಸ್ವಾಮಿ, ನಿಮ್ಮ ತಂದೆ ಈ ಜಿಲ್ಲೆಗೆ ಬಂದು ನನ್ನ ಕರ್ಮಭೂಮಿ, ಪುಣ್ಯ ಭೂಮಿ ಎಂದು ಹೇಳಿ ಇಡೀ ಕುಟುಂಬ ಅಧಿಕಾರ ಅನುಭವಿಸುವಂತೆ ಮಾಡಿದರು. ನಿಮ್ಮ ತಂದೆ ಈ ಜಿಲ್ಲೆಯಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ನಿಮ್ಮ ಧರ್ಮಪತ್ನಿ ಇದೇ ಜಿಲ್ಲೆಯಲ್ಲಿ ಶಾಸಕರಾದರು. ನೀನು ಈ ಭಾಗದಿಂದ ಸಂಸದನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದೆ. ಆದರೂ ನಿಮ್ಮ ಪಕ್ಷದ ಬಾವುಟ ಇಲ್ಲದೇ ಈ ಪಾದಯಾತ್ರೆ ಮಾಡುತ್ತಿದ್ದೀರಲ್ಲಾ, ನಿಮಗೆ ಸ್ವಾಭಿಮಾನವೇನಾದರೂ ಇದೆಯೇ” ಎಂದು ಲೇವಡಿ ಮಾಡಿದರು.

“ಕುದುರೆ ಎಷ್ಟೇ ಚೆನ್ನಾಗಿ ರಥ ಓಡಿಸಿದರೂ ಚಾಟಿ ಏಟು ತಪ್ಪುವುದಿಲ್ಲ. ಚುನಾವಣೆಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೂ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ, ನಿಮ್ಮ ಹೋರಾಟ ನಡೆಯುತ್ತದೆ. ಕೆಲವೆಡೆ ನಾವು ಗೆದ್ದಿದ್ದೇವೆ, ಕೆಲವೆಡೆ ನೀವು ಗೆದ್ದಿದ್ದೀರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ. ಕುಮಾರಸ್ವಾಮಿ ಮೊನ್ನೆಯಷ್ಟೇ ಮಾಧ್ಯಮಗಳ ಮುಂದೆ ನೀನು ಏನು ಹೇಳಿದ್ದೆ? ಪಾದಯಾತ್ರೆಗೆ ಬೆಂಬಲವಿಲ್ಲ ಎಂದಿದ್ದೆ. ಆದರೆ ಇಲ್ಲಿಯವರೆಗೂ ಇದು ನನ್ನ ಭೂಮಿ, ಇಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇನೆ, ಬಿಜೆಪಿ ಅಲ್ಲ ಎಂದು ಹೇಳಲು ನಿನಗೆ ಧೈರ್ಯ ಸಾಲುತ್ತಿಲ್ಲ ಅಲ್ಲವೇ ” ಎಂದು ಕಿಡಿಕಾರಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement