ಕೋವಿಡ್ ಸಾಂಕ್ರಾಮಿಕದ ಬಳಿಕ ಜಗತ್ತನ್ನು ಆತಂಕಕ್ಕೆ ತಳ್ಳಿದ್ದ ಮಂಕಿಫಾಕ್ಸ್ ಮತ್ತೆ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತೊಮ್ಮೆ ಮಂಕಿಪಾಕ್ಸ್ (Mpox) ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಪಕ್ಕದ ದೇಶಗಳಿಗೆ ವೈರಸ್ ಹರಡಿದ್ದು, ಪ್ರಕರಣದ ಸಂಖ್ಯೆಯಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.
ಎಂಪಾಕ್ಸ್ (Mpox) ಒಂದು ವೈರಲ್ ಸೋಂಕು ಎಂದು ವರ್ಗಿಕರಿಸಲಾಗಿದ್ದು, ಸೋಂಕಿತರ ಜೊತೆ ನಿಕಟ ಸಂಪರ್ಕದ ಮೂಲಕ ಹರಡುತ್ತದೆ. ರೋಗ ಲಕ್ಷಣ ಸೌಮ್ಯವಾಗಿದ್ದರೂ, ಅಪರೂಪದ ಸಂದರ್ಭಗಳಲ್ಲಿ ಇದು ಜೀವ ತೆಗೆಯಬಹುದು. ರೋಗಲಕ್ಷಣಗಳು ಜ್ವರ ತರಹದ ಅನಾರೋಗ್ಯ ಮತ್ತು ಕೀವು ತುಂಬಿದ ಗಾಯಗಳ ದದ್ದುಗಳನ್ನು ನೋಡಬಹುದು. ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ (PHEIC) ಘೋಷಣೆ ಮಾಡಿರುವುದು ಎಚ್ಚರಿಕೆಯ ಸೂಚನೆಯಾಗಿದೆ. ರೋಗ ಹರಡುವಿಕೆಯನ್ನು ಸಾರ್ವಜನಿಕ ಆರೋಗ್ಯ ತುರ್ತು ಎಂದು ಘೋಷಿಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಈ ಕಾಯಿಲೆಯನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಸಂಶೋಧನೆ, ಧನಸಹಾಯ ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗೆ ವೇಗ ನೀಡಬಹುದು.
ಎರಡನೇ ಬಾರಿ ತುರ್ತುಪರಿಸ್ಥಿತಿ!
ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಎಂಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಣೆ ಮಾಡಿದೆ. 2022ರ ಜುಲೈನಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಹರಡುವಿಕೆಯನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು. 116 ದೇಶಗಳಲ್ಲಿ ಸುಮಾರು 100,000 ಜನರಿಗೆ ಮಂಕಿಪಾಕ್ಸ್ ಸೋಂಕು ತಗುಲಿತ್ತು, ಸುಮಾರು 200 ಮಂದಿ ಮೃತಪಟ್ಟಿದ್ದರು.
ಈಗ ಮತ್ತೆ ಸೋಂಕು ತೀವ್ರವಾಗಿದೆ. ಈ ವರ್ಷದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶವೊಂದರಲ್ಲೇ 14,000 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 524 ಜನರು ಮೃತಪಟ್ಟಿದ್ದಾರೆ. 15 ವರ್ಷದೊಳಗಿನ ಬಾಲಕಿಯರು ಮತ್ತು ಮಕ್ಕಳಿಗೆ ಇದು ಹೆಚ್ಚು ಮಾರಣಾಂತಿಕವಾಗಿದೆ. ಆಫ್ರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಕೂಡ ಎಂಪಾಕ್ಸ್ ಅನ್ನು ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ.