ನವದೆಹಲಿ: ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಹಿಮಾಚಲ ಪ್ರದೇಶ ಹೈಕೋರ್ಟ್ ಬುಧವಾರ ಕಂಗನಾ ರಣಾವತ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 21ರ ಒಳಗಾಗಿ ಉತ್ತರ ನೀಡಬೇಕು ಎಂದು ನ್ಯಾಯಮೂರ್ತಿ ಜೋತ್ಸ್ನಾ ರೆವಾಲ್ ಅವರು ನೋಟಿಸ್ ನೀಡುವ ವೇಳೆ ನಿರ್ದೇಶನ ನೀಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ತನ್ನ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬವರು ದೂರು ಸಲ್ಲಿಸಿದ್ದರು. ಅಲ್ಲದೆ ಜಿಲ್ಲಾಧಿಕಾರಿಯವರನ್ನೂ ಪಕ್ಷಗಾರರನ್ನಾಗಿ ಮಾಡಿದ್ದರು.
ಅರಣ್ಯ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ನೇಗಿ, ಮೇ 14ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೇ 15ರಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಚುನಾವಣಾ ಅಧಿಕಾರಿ ಅದನ್ನು ಸ್ವೀಕರಿಸಿರಲಿಲ್ಲ ಎಂದು ನೇಗಿ ಆರೋಪಿದ್ದಾರೆ.