ಚಿಕ್ಕಮಗಳೂರು: ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣವಿದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು 2-3 ಪರ್ಸೆಂಟ್ ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಇಂದು ಗೆಲ್ಲುತ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಂಡ್ಯದಲ್ಲಿ ಹೊಂದಾಣಿಕೆ ಆಗಿರುವುದರಿಂದ ಯಾರು ಎಲ್ಲಿ ಸ್ಪರ್ಧಿಸಬೇಕೆಂದು ತೀರ್ಮಾನ ಆಗಿಲ್ಲ, ಹೊಂದಾಣಿಕೆ ಮಾತುಕತೆ ಬಳಿಕ ಎಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ತೀರ್ಮಾನದ ಬಳಿಕ ಎಲ್ಲಾ ಸರಿಯಾಗುತ್ತದೆ ಎಂದರು.
ಇನ್ನು ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ. ಕಾಂಗ್ರೆಸ್ ನವರು ಯಾಕೆ ಹೋಗಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನಕ್ಕೆ ನನಗೆ ಸಂಬಂಧವಿಲ್ಲ ಎಂದಿದ್ದಾರೆ.
ರಾಮಮಂದಿರ ಆಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ, ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ರಾಮಮಂದಿರ ಉದ್ಘಾಟನೆ ಭಾರತದ ಹಬ್ಬವಾಗಿದ್ದು, ರಾಮಮಂದಿರ ನಿಜವಾದ ರಾಮರಾಜ್ಯದ ಕನಸು ಎಂದು ತಿಳಿಸಿದ್ದಾರೆ.