ಮಂಡ್ಯ: ಕೇರಳದಲ್ಲಿ ಕೊರೊನಾ ರೂಪಾಂತರಿ ಜೆಎನ್. 1 ಪತ್ತೆಯಾದ ಬೆನ್ನಲ್ಲೇ ಮಂಡ್ಯ ಮದ್ದೂರು ತಾಲೂಕಿನ ವ್ಯಕ್ತಿಯೋರ್ವರಿಗೆ ಕೊರೊನಾ ರೂಪಾಂತರಿ ಜೆಎನ್. 1 ಪ್ರಕರಣ ಪತ್ತೆಯಾಗಿದೆ. ಇದು ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೊರೊನಾ ಪ್ರಕರಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಸೋಂಕಿತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಈತ ಜ್ವರದಿಂದಾಗಿ ಆಸ್ಪತ್ರೆಗೆ ತೆರಳಿದ್ದು, ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೂ ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ತಪಾಸಣೆ ನಡೆಸಿದಾಗ ಅವರೆಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಸೋಂಕಿತ ವ್ಯಕ್ತಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸಾಧ್ಯತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಂಡ್ಯದ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಅವರು, ಸೋಂಕಿತ ವ್ಯಕ್ತಿಗೆ ಕೊರೊನಾ ಲಕ್ಷಣಗಳಿರಲಿಲ್ಲ. ನಿಯಮಾನುಸಾರ ಆತನಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿದೆ. ಬಳಿಕ ಅವರ ಕುಟುಂಬದ ನಾಲ್ವರಿಗೂ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಇಂದೇ ಡಿಸ್ಚಾರ್ಜ್ ಆಗಲಿದ್ದಾರೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಕೊರೊನಾ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.