ಪ್ರತೀ ಮಗುವಿನ ಜೀವಿತಾವಧಿಯಲ್ಲಿ ಆರೋಗ್ಯದ ಕೆಲವು ಅಂಶಗಳು ನಿರ್ಧಾರವಾಗುವುದು ಆಹಾರದ ಮೇಲೆ. ಯಾವ ರೀತಿಯ ಆಹಾರ ಸೇವನೆ ಮಾಡಿದರೆ ದೇಹಕ್ಕೆ ಒಳಿತು ಎನ್ನುವುದನ್ನು ಚಿಕ್ಕವರಿರುವಾಗ ಹೆತ್ತವರೇ ನೋಡಿಕೊಳ್ಳುತ್ತಾರೆ. ಇಂದಿಗೂ ನೆನಪಿನ ಪುಟ ತೆರೆದರೆ ಸಿಗುವ ಒಂದು ಸಿಹಿ ನೆನಪು ಎಂದರೆ ಅದು ಪ್ರತಿ ದಿನ ಅಮ್ಮ ಲೋಟದ ತುಂಬ ಹಾಲು ಹಾಕಿಕೊಡುವುದು. ದೇಹದ ಸರ್ವಾಂಗೀಣ ಬೆಳವಣಿಗೆಯಲ್ಲಿ ಹಾಲು ಪ್ರಮುಖ ಪಾತ್ರ ವಹಿಸುತ್ತದೆ.
ಆದ್ದರಿಂದ ಹಿರಿಯರು ಮಕ್ಕಳಿಗೆ ಚಹಾ, ಕಾಫಿ ಯಂತಹ ಪಾನೀಯಗಳನ್ನು ನೀಡದೆ ಹಾಲನ್ನೇ ಕುಡಿಯಲು ಸೂಚಿಸುತ್ತಿದ್ದರು. ಅದಕ್ಕೆ ವೈಜ್ಞಾನಿಕ ಕಾರಣಗಳೂ ಸೇರಿಕೊಂಡಿರುತ್ತವೆ. ಹೌದು, ನಿಮ್ಮ ಮಕ್ಕಳ ಆರೋಗ್ಯ ನೀವು ಕೊಡುವ ಅಹಾರ ಪದಾರ್ಥಗಳಲ್ಲೇ ಇದೆ. ನಿಮ್ಮ ಮಕ್ಕಳಿಗೆ ಟೀ ಅಥವಾ ಕಾಫಿಯ ಅಭ್ಯಾಸ ಮಾಡಿಸಿದ್ದರೆ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆಯೇ ಸರಿ. ಟೀ, ಕಾಫಿಯಲ್ಲಿರುವ ಕೆಫಿನ್ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಫಿನ್ ಅಂಶವಿರುವ ಪಾನೀಯಗಳನ್ನು ಒಂದು ಬಾರಿ ಅಭ್ಯಾಸ ಮಾಡಿಕೊಂಡರೆ ಒಂದು ರೀತಿಯ ಡ್ರಗ್ಸ್ ಇದ್ದಂತೆ ಸರಿ. ಏಕೆಂದರೆ ಕೆಫಿನ್ಅನ್ನು ಒಂದು ರೀತಿಯ ಡ್ರಗ್ಸ್ ಎಂತಲೇ ಕರೆಯುತ್ತಾರೆ. ಹೀಗಾಗಿ ಇಂತಹ ಅಭ್ಯಾಸಗಳಿಂದ ಮಕ್ಕಳನ್ನು ದೂರ ಇಡುವುದು ಒಳಿತು.
ಹಾಗಾದರೆ ಟೀ ಕಾಫಿ ಸೇವನೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ. ಮೆದುಳಿನ ಆರೋಗ್ಯ : ಕೆಫಿನ್ ಅಂಶಗಳು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಟೀ ಕಾಫಿಯನ್ನು ಮಕ್ಕಳಿಗೆ ನೀಡಿದರೆ ಇದರಿಂದ ಭಯ, ಆತಂಕ, ಗೊಂದಲದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಙರು. ಹೃದಯ ಮತ್ತು ರಕ್ತದೊತ್ತಡ : 20 ವರ್ಷದೊಳಗಿನ ಮಕ್ಕಳಲ್ಲಿ ಕೆಫಿನ್ ಅಂಶ ಬೀರುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿದಾಗ ಬಹುಪಾಲಿನ ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ರಕ್ತದೊತ್ತಡದ ಸಮಸ್ಯೆಗಳು ಕಾಣಿಸಿಕೊಂಡಿದೆ. 2014ರಲ್ಲಿ ಈ ಅಧ್ಯಯನ ನಡೆಸಲಾಗಿದ್ದು ಟೀ ಕಾಫಿ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ದೃಢಪಟ್ಟಿವೆ.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಕೆಫಿನ್ ಅಂಶಗಳಿರುವ ಕಾಫಿ, ಟೀ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರದಂತಹ ಅನಾರೋಗ್ಯ ಉಂಟಾಗುತ್ತದೆ. ಬೆಳವಣಿಗೆಯಲ್ಲಿ ಬದಲಾವಣೆ : ನಿಯಮಿತವಾಗಿ ಮಕ್ಕಳು ಟೀ ಕಾಫಿ ಸೇವಿಸುವುದರಿಂದ ಬೆಳವಣಿಗೆಯಲ್ಲಿ ಬದಲಾವಣೆಯಾಗುತ್ತದೆ. ಏಕಾಗ್ರತೆ ಕೊರತೆ, ನಿದ್ರಾ ಹೀನತೆ, ಚಡಪಡಿಕೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಆರಂಭವಾಗುತ್ತದೆ. ಹೃದಯ ಸ್ತಂಭನ : ಕೆಫಿನ್ ಒಂದು ರೀತಿಯ ವಿಷವಿದ್ದಂತೆ. ನಿಧಾನವಾಗಿ ದೇಹವನ್ನು ಕೊಲ್ಲುತ್ತದೆ. ಅತಿಯಾದ ಟೀ ಅಥವಾ ಕಾಫಿಯ ಸೇವನೆ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಙರು. 10 ಗ್ರಾಂಗಿಂತ ಹೆಚ್ಚಿನ ಕೆಫಿನ್ ಅಂಶವನ್ನು ದೇಹಕ್ಕೆ ಪ್ರತಿನಿತ್ಯ ನೀಡಿದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆಯೇ ಸರಿ.