ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆಗೆ ಈಗ ಟ್ವಿಸ್ಟ್ ಸಿಕ್ಕಿದ್ದು, ಮಗನ ಜೊತೆಗೆ ತಂದೆಯೂ ಇದೀಗ ಜೈಲು ಸೇರಿದ್ದಾರೆ.
ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅಪ್ರಾಪ್ತ ಪುತ್ರ ಕಾಲೇಜಿಗೆ ಹೊರಡುವ ಅವಸರದಲ್ಲಿದ್ದು, ಈ ವೇಳೆ ತಾಯಿ ತಿಂಡಿ ಮಾಡಿಲ್ಲ ಎಂದು ಸಿಟ್ಟಿಗೆದ್ದು ಕೊಲೆ ಮಾಡಿದ್ದ. ಜಸ್ಟ್ ಭೀಮಯ್ಯ ಲೇಔಟ್ ನಿವಾಸಿ ನೇತ್ರ(40) ಮಗನಿಂದಲೇ ಕೊಲೆಯಾಗಿದ್ದಳು. ಫೆಬ್ರವರಿ 2ರಂದು ನಡೆದ ಈ ಕೊಲೆಗೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿ ಕೊಲೆಗೆ ಬಳಸಲಾಗಿದ್ದ ರಾಡ್ನಲ್ಲಿ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿರುವುದು ಬಯಲಾಗಿದೆ.
ಅಕ್ರಮ ಸಂಬಂಧ,ಕುಡಿತದ ಚಟ:
ಕೊಲೆಯಾದ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟವಿದ್ದು, ಮನೆ ಬಿಟ್ಟು ಹೋಗಿ 2-3 ದಿನ ಮನೆಗೆ ಬರ್ತಾ ಇರಲಿಲ್ಲ. ನಾವು ಊಟ ಇಲ್ಲದೆ ಉಪವಾಸವಿದ್ದು, ಈ ಬಗ್ಗೆ ಪ್ರಶ್ನಿಸಿದ್ದರೆ ಜಗಳಕ್ಕೆ ಬರುತ್ತಿದ್ದಳು.ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ತಂದೆ-ಮಗ ಸೇರಿಕೊಂಡು ತಾಯಿಯ ಕೊಲೆ ಮಾಡಿ ಬಳಿಕ ತಂದೆಯ ಬಗ್ಗೆ ಯೋಚನೆ ಮಾಡಿದ್ದ ಅಪ್ರಾಪ್ತ ಮಗ, ತಂದೆ ಜೈಲಿಗೆ ಹೋಗೋದು ಬೇಡ ಎಂದು ಕೊಲೆಯನ್ನ ತನ್ನ ಮೇಲೆಯೇ ಹಾಕಿಕೊಂಡಿದ್ದಾನೆ. ಪತ್ನಿ ಮೃತಪಟ್ಟ ಬಳಿಕ ಚಂದ್ರಪ್ಪ ಅಲ್ಲಿಂದ ಪರಾರಿಯಾಗಿದ್ದು ಮಗ ಕೆ.ಆರ್. ಪುರಂ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. ಕೊಲೆಯಾದ ಬಳಿಕ ತಂದೆ ಮಗ ಮಾತನಾಡಿಕೊಂಡಿದ್ದು ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಇರುತ್ತೆ, ಜೊತೆಗೆ ಅವರೇ ವಿದ್ಯಾಭ್ಯಾಸ ಕೊಡಿಸ್ತಾರೆ ಎಂದು ಅಪ್ಪನನ್ನು ಜೈಲಿಗೆ ಹೋಗದಂತೆ ಮಗ ಓಲೈಸಿದ್ದ. ನಾನು ಜೈಲಿನಿಂದ ಬರುವಷ್ಟರಲ್ಲಿ ನೀನು ಚೆನ್ನಾಗಿ ಹಣ ಮಾಡಿಕೊಂಡಿರು ಎಂದು ಹೇಳಿ ತಂದೆಗೆ ಕೊಲೆಯಾದ ಸ್ಥಳದಿಂದ ಹೋಗಲು ಹೇಳಿ ಅಪ್ರಾಪ್ತ ಬಾಲಕನೇ ಠಾಣೆಗೆ ಬಂದು ಸರೆಂಡರ್ ಆಗಿದ್ದ. ಆದರೆ ಈಗ ಅಪ್ಪ – ಮಗನ ಉಪಾಯ ಬಯಲಾಗಿ ಕೂಡ ಜೈಲು ಸೇರಿದ್ದಾನೆ.