ಚೆನ್ನೈ : ಸಾಮಾಜಿಕ ಜಾಲತಾಣದಲ್ಲಿ ಬರುವ ಕಮೆಂಟ್ ಟ್ರೋಲ್ ಗಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಟ್ಟಿಲ್ಲ. ಇತ್ತೀಚೆಗೆ ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡ ಬಳಿಕ ರಜನಿಕಾಂತ್ ಮೇಲೆ ನಿರ್ದೇಶಕರೊಬ್ಬರ ಹೇಳಿಕೆ ರಜಿನಿಕಾಂತ್ ಅವರಂತ ನಟರನ್ನೆ ಯೋಚಿಸುವಂತೆ ಮಾಡಿದೆ. ಈ ಬಗ್ಗೆ ಲಾಲ್ ಸಲಾಂ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಐಶ್ವರ್ಯಾ ತನ್ನ ಹಾಗೂ ತಂದೆ ವಿಚಾರದಲ್ಲಿ ಬರುತ್ತಿರುವ ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದರು.
ನಾನು ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ. ನನ್ನ ತಂಡವು ಆನ್‌ಲೈನ್ ನೆಗೆಟಿವಿಟಿ ಬಗ್ಗೆ ನನಗೆ ಆಗಾಗ್ಗೆ ಹೇಳುತ್ತದೆ. ಅದರಿಂದ ನಾನು ಕೋಪಗೊಳ್ಳುವ ಸಂದರ್ಭಗಳಿವೆ. ನಾವೂ ಮನುಷ್ಯರು. ನಮಗೂ ಭಾವನೆಗಳಿವೆ. ಇತ್ತೀಚೆಗೆ ನನ್ನ ತಂದೆಯನ್ನು ‘ಸಂಘಿ’ ಎಂದು ಟೀಕಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಹಾಗೆ ಕರೆಯುತ್ತಾರೆ ಎಂದು ನನಗೆ ತಿಳಿದಿದೆ. ರಜನಿಕಾಂತ್ ಸಂಘಿ ಅಲ್ಲ. ಹಾಗಿದ್ದಲ್ಲಿ ಅವರು ‘ಲಾಲ್ ಸಲಾಂ’ ಚಿತ್ರದಲ್ಲಿ ನಟಿಸುತ್ತಿರಲಿಲ್ಲ ಎಂದು ಐಶ್ವರ್ಯಾ ನೋವು ತೋಡಿಕೊಂಡರು.
ಐಶ್ವರ್ಯಾ ಮಾತುಗಳನ್ನು ಕೇಳಿದ ರಜನಿಕಾಂತ್ ಕಣ್ಣೀರು ಹಾಕಿದರು. ಇದು ಪ್ರೇಕ್ಷಕರನ್ನು ದುಃಖದ ಮಡುವಿನಲ್ಲಿ ತಳ್ಳುವಂತೆ ಮಾಡಿತು. ಜೈಲರ್ ಕಾರ್ಯಕ್ರಮದ ಅಂಗವಾಗಿ ‘ಅರ್ಥಮೈಂದಾ ರಾಜ’ ಎಂದು ನನ್ನ ಕಾಮೆಂಟ್‌ಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ವಿಜಯ್ ಮೇಲೆ ಪರೋಕ್ಷವಾಗಿ ವಾಗ್ಧಾಳಿ ನಡೆಸಿ, ನನ್ನ ಮನಸ್ಸಿಗೆ ನೋವಾಗುವಂತೆ ಮಾಡಿದ್ದಾರೆ. ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ, ಆತ ಈ ಮಟ್ಟಕ್ಕೆ ತಲುಪಿದ್ದಾನೆ ಎಂದರೆ ಆತನ ಪ್ರತಿಭೆ ಮತ್ತು ಪರಿಶ್ರಮ ಕಾರಣ. ನನಗೆ ಯಾರೊಂದಿಗೂ ಸ್ಪರ್ಧೆ ಇಲ್ಲ, ನನಗೆ ನಾನು ಸ್ಪರ್ಧಿ ಎಂದು ನಮ್ಮ ಅಭಿಮಾನಿಗಳಿಗೆ ಮಾತ್ರ ಹೇಳಬಲ್ಲೆ. ನಮ್ಮನ್ನು ಯಾರಿಗೂ ಹೋಲಿಸಬೇಡಿ ಎಂದು ರಜನಿಕಾಂತ್ ನೋವು ತೋಡಿಕೊಂಡರು.