ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಇಲ್ಲಿನ ಜಿರಿಬಾಮ್ ಜಿಲ್ಲೆಯಲ್ಲಿ ಬೆಳಗ್ಗೆ ಇಬ್ಬರು ವೃದ್ಧರ ಶವ ಪತ್ತೆಯಾಗಿದೆ. ಜೊತೆಗೆ 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನ. 12ರಂದು ನಡೆದ ಗುಂಡಿನ ದಾಳಿಯ ನಂತರ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು ದಿನದ ಹಿಂದೆ, ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆದಿತ್ತು. ಈ ಎನ್ಕೌಂಟರ್ ನಲ್ಲಿ 11 ಉಗ್ರರು ಮೃತಪಟ್ಟಿದ್ದರು. ಇನ್ನು ನಾಪತ್ತೆಯಾದವರಿಗಾಗಿ ಆರಂಭಿಸಲಾದ ಶೋಧ ಕಾರ್ಯದಲ್ಲಿ ಜಕುರಧೋರ್ ಕರೋಂಗ್ ಪ್ರದೇಶದಲ್ಲಿ ಅವಶೇಷಗಳಡಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ನ.11ರಂದು ಈ ಸ್ಥಳದಲ್ಲಿ ಶಂಕಿತ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಜುಕುರಾದೋರ್ ಕರೋಂಗ್ ಪ್ರದೇಶದಲ್ಲಿ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ ನಂತರ ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿರಿಬಾಮ್ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.