ನವದೆಹಲಿ: ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅಭಿನಂದಿಸಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಚಾಟಿ ಬೀಸಿದೆ. ‘ಇದೊಂದು ಸಾಂಘಿಕ ಪ್ರಯತ್ನ. ಕ್ಲಿನಿಕಲ್, ಅದ್ಭುತ, ಬುಲ್ಡೋಜಿಂಗ್ ಪ್ರದರ್ಶನ’ ಎಂದು ರವಿ ಶಾಸ್ತ್ರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಧಾನಸಭೆ ಚುನಾವಣೆ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎನ್ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ಮಣಿಪುರದ ಬಗ್ಗೆಯೂ ಏನಾದರೂ ಹೇಳುವಂತೆ ಶಾಸ್ತ್ರಿ ಅವರನ್ನು ಕೇಳಿದ್ದಾರೆ. ನೀವೂ ಯಾವಾಗಲೂ ‘ಟ್ರೇಸರ್ ಬುಲೆಟಿನ್’ನಂತೆ ಮಾತನಾಡುತ್ತೀರಿ. ಮಣಿಪುರದಲ್ಲಿ ಅನೇಕ ಅಮಾಯಕ ಜನರ ಜೀವಗಳನ್ನು ಬಲಿ ತೆಗೆದುಕೊಂಡ ಬುಲೆಟ್ಗಳ ಬಗ್ಗೆಯೂ ಸ್ವಲ್ಪ ಹೇಳಿ. ನಮ್ಮ ಮಹಿಳಾ ಕುಸ್ತಿಪಟುಗಳ ಹೋರಾಟ ಮತ್ತು ಬಿಜೆಪಿ ಸಂಸದನಿಂದ ನ್ಯಾಯ ಬಯಸುತ್ತಿರುವ ಮಹಿಳಾ ಕುಸ್ತಿಪಟುಗಳ ಸಂಕಷ್ಟದ ಬಗ್ಗೆಯೂ ದಯವಿಟ್ಟು ಅಭಿಪ್ರಾಯ ತಿಳಿಸಿ ಎಂದು ಎನ್ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
