ಮಣಿಪುರ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ. ಬುಡಕಟ್ಟು ಮಹಿಳೆಯರನ್ನು ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ ಬೆಚ್ಚಿಬೀಳಿಸಿದೆ. ಕಾಕ್ಚಿಂಗ್ ಜಿಲ್ಲೆಯ ಸೆರೌ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ 80 ವರ್ಷದ ಪತ್ನಿಯನ್ನು ಮನೆಯೊಳಗೆ ಬೀಗ ಹಾಕಿ ಸಶಸ್ತ್ರ ಗುಂಪು ಬೆಂಕಿ ಹಚ್ಚಿದೆ ಎಂದು ಸೆರೌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಹಿಳೆಯ ಪತಿ ಎಸ್ ಚುರಚಂದ್ ಸಿಂಗ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಗೌರವಿಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸೆರೌನಂತಹ ಸ್ಥಳಗಳಲ್ಲಿ ಭಾರಿ ಹಿಂಸಾಚಾರ ಮತ್ತು ಗುಂಡಿನ ಚಕಮಕಿಯನ್ನು ನಡೆದಿತ್ತು. ಮೇ 3 ರಂದು ಹಿಂಸಾಚಾರ ಪ್ರಾರಂಭವಾಗುವ ಮೊದಲು ಸೆರೌ ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 45 ಕಿ.ಮೀ.ದೂರದಲ್ಲಿರುವ ಒಂದು ಸುಂದರವಾದ ಗ್ರಾಮವಾಗಿತ್ತು. ಆದರೆ ಈಗ ಅಲ್ಲಿ ಸುಟ್ಟ ಮನೆಗಳು ಮತ್ತು ಗೋಡೆಗಳ ಮೇಲೆ ಗುಂಡಿನ ರಂಧ್ರಗಳು ಮಾತ್ರ ಉಳಿದಿವೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ಪರಿಶಿಷ್ಟ ಪಂಗಡಗಳ ಸ್ಥಾನಮಾನಕ್ಕಾಗಿ ಮೈತಿ ಬೇಡಿಕೆಯ ಮೇಲೆ ಕಣಿವೆಯ ಬಹುಸಂಖ್ಯಾತ ಮೈತಿ ಮತ್ತು ಬೆಟ್ಟದ ಬಹುಸಂಖ್ಯಾತ ಕುಕಿ ಬುಡಕಟ್ಟಿನ ನಡುವಿನ ಘರ್ಷಣೆಯ ಸಮಯದಲ್ಲಿ ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ ಇದೂ ಒಂದಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಪತ್ನಿ 80 ವರ್ಷದ ಇಬೆತೊಂಬಿ ಮನೆಯೊಳಗೆ ಇದ್ದರು. ಅವರ ಗ್ರಾಮದ ಮೇಲೆ ದಾಳಿ ಮಾಡಿದವರು ಹೊರಗಿನಿಂದ ಬೀಗ ಹಾಕಿದ್ದರು. ಆನಂತರ ಮನೆಗೆ ಬೆಂಕಿ ಹಚ್ಚಲಾಗಿದೆ. ಕುಟುಂಬ ರಕ್ಷಿಸಲು ಬರುವಷ್ಟರಲ್ಲಿ ಬೆಂಕಿಯು ಸಂಪೂರ್ಣ ಕಟ್ಟಡವನ್ನು ಸುಟ್ಟು ಹಾಕಿತ್ತು.
ಅಜ್ಜಿಯನ್ನು ಉಳಿಸಲು ಪ್ರಯತ್ನಿಸಿದಾಗ ಗುಂಡುಗಳು ತೋಳು ಮತ್ತು ತೊಡೆಗೆ ತಾಗಿತ್ತು. ನಾವು ದಾಳಿಗೆ ಒಳಗಾದಾಗ, ನನ್ನ ಅಜ್ಜಿ ನಮಗೆ ಈಗ ಓಡಿಹೋಗಿ ಸ್ವಲ್ಪ ಸಮಯದ ನಂತರ ಹಿಂತಿರುಗಿ ಬನ್ನಿ ಎಂದು ಹೇಳಿದ್ದರು. ನಾವು ಹೊರಡುವಾಗ ನನ್ನನ್ನು ಕರೆದೊಯ್ಯಲು ವಾಪಸ್ ಬನ್ನಿ ಎಂದು ಆಕೆ ಹೇಳಿದ್ದರು. ದುರದೃಷ್ಟವಶಾತ್ ಅದು ಅವರ ಕೊನೆಯ ಮಾತುಗಳಾಗಿತ್ತು. ಅಜ್ಜಿಗೆ ಓಡಲಾಗದ ಕಾರಣ ಮನೆಯಲ್ಲೇ ಬಾಕಿಯಾದರು ಅಂತ ಮೊಮ್ಮಗ ಕಣ್ಣೀರು ಹಾಕಿದ್ದಾರೆ.