ಮಣಿಪುರದಲ್ಲಿ ಗುಂಪಿನಿಂದ ಹಲ್ಲೆಗೊಳಗಾದ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಶಾಸಕರ ಪುತ್ರ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ದಾಳಿಕೋರರು ತನ್ನ ತಂದೆಯನ್ನು ಕಟ್ಟಿಹಾಕಿದ್ದರು. ಅಷ್ಟೇ ಅಲ್ಲದೆ ವಿದ್ಯುತ್ ಶಾಕ್ ನೀಡಿದ್ದಾನೆ. ಘಟನೆಯ ನಂತರ ಸರ್ಕಾರದಿಂದ ಯಾವುದೇ ಸಹಾಯವೂ ಸಿಕ್ಕಿಲ್ಲ ಎಂದು ಬಿಜೆಪಿ ಶಾಸಕನ ಪುತ್ರ ಅಳಲು ತೋಡಿಕೊಂಡಿದ್ದಾರೆ. ಫೆರ್ಜಾಲ್ ಜಿಲ್ಲೆಯ ಥಾನ್ಲೋನ್ ನಿಂದ ಮೂರು ಬಾರಿ ಶಾಸಕರಾಗಿರುವ ವಾಲ್ಟೆ ಅವರು ಇಂಫಾಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿತ್ತು. ಶಾಸಕ ಮತ್ತು ಅವರ ಚಾಲಕನ ಮೇಲೆ ಆಕ್ರೋಶಗೊಂಡ ಗುಂಪು ಹಲ್ಲೆ ನಡೆಸಿದ್ದು, ಅವರ ಪಿಎಸ್‌ಒ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವುಂಗ್‌ಜಾಗಿನ್ ವಾಲ್ಟೆ ಕುಕಿ ಸಮುದಾಯದಿಂದ ಬಂದವರು. ಅವರು ಕಳೆದ ಬಿಜೆಪಿ ಸರ್ಕಾರದಲ್ಲಿ ಮಣಿಪುರದ ಬುಡಕಟ್ಟು ವ್ಯವಹಾರಗಳು ಮತ್ತು ಹಿಲ್ಸ್ ಸಚಿವರಾಗಿದ್ದರು.