ದೆಹಲಿ: ನಾವೆಲ್ಲ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಲು ಒಕ್ಕೊರಲಿನಿಂದ ಬೆಂಬಲಿಸುತ್ತಿದ್ದೇವೆ. ಮೈತ್ರಿ ಪಕ್ಷದ ವತಿಯಿಂದ ಶಾಸಕಾಂಗ ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಸೇರಿದಂತೆ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್-NDA ನಿಂದ ಮಹತ್ವದ ನಿರ್ಧಾರ ಹೊರ ಬಿದ್ದಿದೆ. ಅಲ್ಲಿಗೆ ಎಲ್ಲ ಗೊಂದಲ ಬಗೆಹರಿದಂತಾಗಿದ್ದು, ನರೇಂದ್ರ ಮೋದಿ ಅವರೇ ಎನ್ ಡಿಎ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತವಾಗಿದೆ.
ಇನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸದಸ್ಯರು ನಾಡಿದ್ದು ಜೂ.8 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಬುಧವಾರ ದೆಹಲಿಯಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮಿತ್ರ ಪಕ್ಷಗಳ ನಾಯಕ ನರೇಂದ್ರ ಮೋದಿ ಅವರು ತಮಗೆ ಬೆಂಬಲ ನೀಡಿದ ಎಲ್ಲ ಹದಿನೆಂಟಕ್ಕೂ ಅಧಿಕ ಪಕ್ಷಗಳ ಸದಸ್ಯರ ಒಪ್ಪಿಗೆ ಪತ್ರಗಳೊಂದಿಗೆ ರಾಷ್ಟ್ರಪತಿಗಳಲ್ಲಿಗೆ ತೆರಳಿ ನಾಳೆ (ಜೂನ್.7) ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲಿದ್ದಾರೆ.
ಟಿಡಿಪಿಯ ಮುಖ್ಯಸ್ಥ ಎಂ.ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು “ಇಂಡಿಯಾ” ದತ್ತ ವಾಲುವ ಮೂಲಕ ಎಲ್ಲಿ ಎನ್ ಡಿಎಗೆ ಕೈ ಕೊಡುತ್ತಾರೋ ಎಂಬ ಆತಂಕ ಇದೀಗ ದೂರವಾದಂತಾಗಿದೆ. ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬುಧವಾರ “ಇಂಡಿಯಾ” ಒಕ್ಕೂಟದ ಸಭೆಯೂ ನಡೆಯಿತು. “ಇಂಡಿಯಾ” ಒಕ್ಕೂಟ ಸರ್ಕಾರ ರಚಿಸುವ ಕಸರತ್ತು ನಡೆಸುವ ಬದಲು ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ನಿರ್ಧಾರ ತಾಳಲಾಗಿದೆ ಎಂದು ಕಾಂಗ್ರೆಸ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.