ಉದ್ಯೋಗ ಕೇಳಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ವಾರಣಾಸಿಯ ರುದ್ರಾಕ್ಷಿ ಕೇಂದ್ರದ ಬಳಿ ಭದ್ರತಾ ಪಡೆಯ ಕಣ್ಣು ತಪ್ಪಿಸಿ ಬ್ಯಾರಿಕೇಡ್ ಜಂಪ್ ಮಾಡಿದ ಗಾಜಿಪುರದ ನಿವಾಸಿ ಕೃಷ್ಣ ಕುಮಾರ್ ಉದ್ಯೋಗ ಕೇಳುವುದಕ್ಕಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಯತ್ನಿಸಿದ್ದ.
ವಾರಣಾಸಿಯಲ್ಲಿ ಕಾರ್ಯಕ್ರಮ ಮುಗಿಸಿ ಪ್ರಧಾನಿ ಮೋದಿಯವರು ಕಾರಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯಲ್ಲಿ ತೆರಳುತ್ತಿದ್ದರು.
ಈ ವೇಳೆ ಕೃಷ್ಣ ಕುಮಾರ್ ಪ್ರಧಾನಿಗಳ ಬೆಂಗಾವಲು ಪಡೆಯ ಕಣ್ಣು ತಪ್ಪಿಸಿ ಬ್ಯಾರಿಕೇಡ್ ಜಂಪ್ ಮಾಡಿ ಮೋದಿಯವರ ಕಾರಿನ ಬಳಿ ಹೋಗಲು ಯತ್ನಿಸಿದ್ದಾರೆ. ಕಾರಿನಿಂದ 20 ಮೀಟರ್ ದೂರದಲ್ಲಿ ಇರುವಾಗಲೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಎಳೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ನನ್ನ ತಂದೆ ಬಿಜೆಪಿಯ ಹಿರಿಯ ಕಾರ್ಯಕರ್ತರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಮೋದಿಯವರನ್ನು ಭೇಟಿಯಾಗಲು ಬಯಸಿದ್ದೆ. ಈ ಕಾರಣಕ್ಕಾಗಿ ಬ್ಯಾರಿಕೇಡ್ ಜಂಪ್ ಮಾಡಿರುವುದಾಗಿ ಆತ ತನಿಖೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ.