ನಟ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ. ಇದೇ ನನ್ನ ಕೊನೆಯ ಬಿಗ್ ಬಾಸ್, ಮುಂದಿನ ಸೀಸನ್‌ನಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಕಾರ್ಯಕ್ರಮ ನಿರೂಪಣೆ ಮಾಡದೇ ಇರಲು ಕಾರಣವನ್ನು ನೀಡದೇ ಇದ್ದರು ಅವರ ದಿಢೀರ್ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸುದೀಪ್ ಅವರ ಈ ಒಂದು ನಿರ್ಧಾರಕ್ಕೆ ಅನೇಕ ರೆಕ್ಕೆಪುಕ್ಕಗಳು ಬೆಳೆದುಕೊಂಡಿದ್ದವು. ಹಲವಾರು ಪ್ರತಿಕ್ರಿಯೆಗಳು ಬಂದಿದ್ದವು. ಸುದೀಪ್ ಇದೇ ಕಾರಣಕ್ಕೆ ಬಿಗ್ಬಾಸ್ನಿಂದ ಹೊರಗೆ ಬಂದರು ಎಂಬ ತಮ್ಮ ಮೂಗಿನ ನೇರಕ್ಕೆ ನಿರ್ಧಾರ ಮಾಡಿದ್ದರು. ಅಂತಹ ಎಲ್ಲ ಪ್ರತಿಕ್ರಿಯೆಗಳಿಗೆ ಹಾಗೂ ವಿಡಿಯೋ, ಪೋಸ್ಟ್ಗಳಿಗೆ ಸುದೀಪ್ ಈಗ ಕೌಂಟರ್ ಕೊಟ್ಟಿದ್ದಾರೆ. ಮತ್ತೊಂದು ಟ್ವೀಟ್ ಮಾಡುವ ಮೂಲಕ ಈ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ. ಇಂದು ಮಧ್ಯಾಹ್ನ 12.04 ಗಂಟೆಯ ಸುಮಾರಿಗೆ ಒಂದು ಟ್ವೀಟ್ ಮಾಡಿರುವ ಕಿಚ್ಚ. ನನ್ನ ಒಂದು ಟ್ವೀಟ್ಗೆ ನೀವು ಸ್ಪಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಇದು ನನಗೆ ತುಂಬಾ ಸಂತಸವನ್ನುಂಟು ಮಾಡಿದೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ . ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದ್ದು. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ಅಲ್ಲ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.
