ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಮರುತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿದರು.
ನಮ್ಮ ಮನೆ ಮಗಳ ಬಗ್ಗೆ ಮಾತನಾಡೋಕೆ ನಾವು ಪರ್ಮಿಷನ್ ತೆಗೋಬೇಕಾ? ಎಂದು ಪ್ರಶ್ನಿಸಿದರು. ನಾವು ಟ್ಯಾಕ್ಸ್ ಕಟ್ಟಿ ಸಾಕುವ ಪಾಪಿಗಳುನ್ನು ನಾವು ಏನು ಮಾತನಾಡಬೇಕು ಅಂತ ಹೇಳಬೇಕಾ?. ಪೊಲೀಸರು, ಇಲ್ಲಿನ ಪಾಪಿ ರಾಜಕಾರಣಿಗಳಿಂದಾಗಿ ಜನರು ನಕ್ಸಲೈಟ್ ಆಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಬ್ಬ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರೋ ಪ್ರದೇಶ ಪಾಕಿಸ್ತಾನದಲ್ಲಿ ಇದೆಯೇ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು. ಇವತ್ತು ಹೊಸ ಸಂಗ್ರಾಮ ಆರಂಭವಾಗಿದೆ, ಹನ್ನೊಂದು ವರ್ಷದಿಂದ ಸೌಜನ್ಯ ಹೋರಾಟ ನಡೆದಿದೆ. ತುಳುನಾಡಿನ ದೈವದ ನಡೆಯಲ್ಲಿ ಹನ್ನೆರೆಡನೇ ವರ್ಷದಲ್ಲಿ ನ್ಯಾಯ ತೀರ್ಮಾನ ಸಿಕ್ಕಿದೆ. ಕಾಮುಕರನ್ನು ಕಾಮಾಂಧರು ಎನ್ನದೇ ಬೇರೆ ಏನು ಎನ್ನಬೇಕು. ನೀವು ಹೆಸರು ಹೇಳಬಾರದು ಅಂತ ಹೇಳಿದ್ರೆ ನಾನು ಹೇಳದೇ ಕೂರುವುದಿಲ್ಲ. ನಾನು ನನ್ನ ಮನೆಯ ಊಟ ಮಾಡುವುದು. ನೀವು ನಮ್ಮ ಹಣದ ಊಟ ಮಾಡೋದು ಎಂದು ಗುಡುಗಿದರು. ಅವರಿಗೆ ಮಾತನಾಡಲು ದಾಖಲೆ ಬೇಕು, ನಾವು ದಾಖಲೆ ಕೊಡ್ತೇವೆ. ಸೌಜನ್ಯ ಕೇಸ್‌ನಲ್ಲಿ ಮುಚ್ಚಿಟ್ಟ ಸತ್ಯದ ದಾಖಲೆಗಳು ಎಲ್ಲಿವೆ ಎಂಬುದು ನನಗೆ ಗೊತ್ತಿದೆ. ಈ ಪಾಪಿ ಪೊಲೀಸರ ತಪ್ಪಿನಿಂದಾಗಿ ಅನ್ಯಾಯವಾಗಿದೆ. ಸೌಜನ್ಯ ಅತ್ಯಾಚಾರ ನಡೆದಾಗ ಇದ್ದ ಪಾಪಿ ಪೊಲೀಸರು ಈಗಲೂ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇದ್ದಾರೆ. ಸುಂದರ್ ಶೆಟ್ಟಿ ಮತ್ತು ಕೃಷ್ಣ ಎಂಬ ಇಬ್ಬರು ಪೊಲೀಸರು ಇಲ್ಲೇ ಇದ್ದಾರೆ. ಸೌಜನ್ಯ ಕೇಸ್ ಆದಾಗ ಸುಂದರ್ ಶೆಟ್ಟಿ ಎಂಬ ಪೊಲೀಸ್ ಎಸ್ಸೈ ಯೋಗೀಶ್ ಕುಮಾರ್ ಬಂಟನಾಗಿದ್ದ. ಇನ್ನೊಬ್ಬ ಕೃಷ್ಣ ಎಂಬ ಪೊಲೀಸ್ ಈಗ ಇಂಟಲಿಜೆನ್ಸ್ ನಲ್ಲಿ ಇದ್ದಾನೆ. ಮತ್ತೊಬ್ಬ ನವೀನ್, ಅವರು ಮಾಡಿದ ತಪ್ಪುಗಳು ತುಂಬಾ ಇದೆ. ಅತ್ಯಾಚಾರ ಮಾಡಿದವರ ಜೊತೆ ಇರೋ ಶಕ್ತಿಗಳು ಯಾರು ಎಂಬುದು ಜನರಿಗೆ ತಿಳಿಯಬೇಕಿದೆ ಎಂದರು. ನನ್ನ ಹತ್ತಿರ ಮತ್ತೊಂದು ದಾಖಲೆ ಇದೆ, ಅದನ್ನ ಮತ್ತೊಂದು ಸಭೆ ಮಾಡಿ ಬಿಚ್ಚಿಡುತ್ತೇನೆ. ಇವರ ಮನೆ ಮಕ್ಕಳು ಅಮೆರಿಕಾದಲ್ಲಿ ಇದ್ರು ಅಂತ ಹೇಳುತ್ತಾರಲ್ಲ. ಆದರೆ ಅವರ ಮನೆ ಮಗ ಎಲ್ಲಿದ್ದ ಅಂತ ನಮಗೆ ದಾಖಲೆ ಸಿಕ್ಕಿದೆ ಎಂದರು. ಗುಂಡೂರಾವ್ ಎಂಬ ದೊಣ್ಣೆ ನಾಯಕನಿಗೆ ಹೇಳಿದ್ರೂ ಮೈದಾನ ಸಿಗಲಿಲ್ಲ: ಮುಂದುವರಿದು ಐಎಎಸ್ ಮಾಡಿದ ಜಿಲ್ಲಾಧಿಕಾರಿ ನಮಗೆ ಪ್ರತಿಭಟನೆ ಮಾಡಲು ಒಂದು ಮೈದಾನ ಕೊಡಲಿಲ್ಲ. ಅಂದು ಇಡೀ ಪ್ರಕರಣವನ್ನ ಆವತ್ತು ಬಿಜೆಪಿ ನಾಶ ಮಾಡಿತು, ಈಗ ಕಾಂಗ್ರೆಸ್ ಮಾಡ್ತಿದೆ ಮುಖ್ಯಮಂತ್ರಿಗಳೇ ನಮ್ಮ ಹೋರಾಟ ಹತ್ತಿಕ್ಕಿದ್ರೆ ನಿಮಗೆ ಸ್ವಾಮಿಯ ಶಾಪ ತಟ್ಟುತ್ತದೆ. ಅವರ್ಯಾರೋ ಗುಂಡೂರಾವ್ ಅಂತೆ, ಆ ದೊಣ್ಣೆ ನಾಯಕನಿಗೆ ಹೇಳಿದ್ರೂ ಮೈದಾನ ಸಿಗಲಿಲ್ಲ. ಅತ್ಯಾಚಾರ ನಡೆದಿರೋದು ಗ್ರಾಮದಲ್ಲಿ ನ್ಯಾಯಪೀಠ ಇರುವ ಗ್ರಾಮದಲ್ಲಿ ನ್ಯಾಯ ಸಿಗದೇ ಇದ್ರೆ ಏನರ್ಥ, ರಾಜಕೀಯ, ಹಿಂದೂ ಮುಖಂಡರು ಎಲ್ಲಿ ಸತ್ತಿದಾರೆ ಎಂದು ಪ್ರಶ್ನಿಸಿದರು. ಈಗ ಇಲ್ಲಿ ಹೋರಾಟ ನಡೆಯುತ್ತಿದೆ. ಬರುವ ದಿನಗಳಲ್ಲಿ ಈ ಹೋರಾಟ ರಾಜ್ಯ ಮಟ್ಟದಲ್ಲಿ ಆರಂಭವಾಗಲಿದೆ. ಒಂದೂವರೆ ತಿಂಗಳಲ್ಲಿ ದೆಹಲಿಗೂ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದರು.