ಬೆಂಗಳೂರು: ವಾಹನ ಸವಾರರಿಗೆ ಸಾರಿಗೆ ಇಲಾಖೆ ಗುಡ್ನ್ಯೂಸ್ ನೀಡಿದ್ದು, ಮತ್ತೆ ಟ್ರಾಫಿಕ್ ದಂಡದಲ್ಲಿ ಶೇಕಡ 50ರಷ್ಟು ಡಿಸ್ಕೌಂಟ್ ನೀಡಿ ಆದೇಶ ಹೊರಡಿಸಿದೆ.
ಈ ವಿಚಾರವಾಗಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಆದೇಶ ನೀಡಿದ್ದು, ಶೇ.50ರಷ್ಟು ದಂಡ ಪಾವತಿಗೆ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ದಂಡ ಕಟ್ಟಲು ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.
ಅನೇಕ ಬಾರಿ ದಂಡ ಕಟ್ಟಿ ಎಂದು ಹೇಳಿದರೂ ಸಹ ಜನರು ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೆಲವರ ಗಾಡಿಯನ್ನ ಚೆಕ್ ಮಾಡಿದರೆ 10 ಸಾವಿರ ರೂಪಾಯಿಗೂ ಹೆಚ್ಚು ದಂಡ ಇರುತ್ತದೆ. ಆದರೆ ಇದ್ಯಾವುದಕ್ಕೂ ಜನ ತಲೆಕೆಡಿಸಿಕೊಂಡಿಲ್ಲ. ಹಾಗಾಗಿಯೇ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಸಾಮಾನ್ಯವಾಗಿ ಜನರಿಗೆ ಡಿಸ್ಕೌಂಟ್ ಎಂದರೆ ಬಹಳ ಇಷ್ಟ. ಹಾಗಾಗಿ ಡಿಸ್ಕೌಂಟ್ ಕೊಟ್ಟ ಮೇಲಾದರೂ ಜನ ದಂಡ ಕಟ್ಟಬಹುದು ಎನ್ನುವ ಕಾರಣಕ್ಕೆ ಪೊಲೀಸರು ಆಫರ್ ಕೊಟ್ಟಿದ್ದು, 50 ಪರ್ಸೆಂಟ್ ಡಿಸ್ಕೌಂಟ್ ಕೊಟ್ಟಿದ್ದಾರೆ. ಇದರಿಂದಾಗಿ ಆರಾಮವಾಗಿ ದಂಡ ಕಟ್ಟಬಹುದು.
ಇನ್ನು 50% ಡಿಸ್ಕೌಂಟ್ ಆಫರ್ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿರುವವರಿಗೆ ಹಾಗೂ ಮಿತಿ ಮೀರಿದ ವೇಗದ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ಗಾಡಿ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವುದು ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಈ ಡಿಸ್ಕೌಂಟ್ ಅನ್ವಯವಾಗುತ್ತದೆ. ಇನ್ನು ಆಫರ್ ಮೂಲಕ ದಂಡ ಪಾವತಿ ಮಾಡಲು ಕರ್ನಾಟಕ ಒನ್ ವೆಬ್ ಸೈಟ್ ಹಾಗೂ ಪೇಟಿಎಂ ಬಳಕೆ ಮಾಡಬಹುದು, ಅಲ್ಲದೇ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿ ಸಹ ಮಾಡಬಹುದಾಗಿದೆ.
































