ರಾಮನಗರ: ಮದುವೆಯಲ್ಲಿ ಐಸ್ ಕ್ರೀಂ ತಿಂದು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ ಅಲ್ಲಿನ ಸಾತನೂರು ಸರ್ಕಲ್ ಬಳಿಯ ಟಿಪ್ಪುನಗರದ ಮಿಲನ್ ಶಾದಿ ಮಹಲ್ ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಪರಿಣಾಮ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚನ್ನಪಟ್ಟಣದ ವಧು ಮತ್ತು ಮಾಗಡಿಯ ವರನ ವಿವಾಹ ಸಮಾರಂಭ ಮಿಲನ್ ಶಾದಿ ಮಹಲ್ ನಲ್ಲಿ ನಡೆಯುತಿತ್ತು. ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ತಿಂದ ಜನರು ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರ ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ವಾಂತಿ, ಭೇದಿ ಶುರುವಾಗಿದೆ. 50ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನವರು ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಐಸ್ ಕ್ರೀಂ ತಿಂದು ಆಸ್ವಸ್ಥಗೊಂಡವರಲ್ಲಿ 40 ಜನರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವಧಿ ಮುಗಿದಿದ್ದ ಐಸ್ ಕ್ರೀಂ ತಿಂದಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಸ್ವಸ್ಥಗೊಂಡವರ ಕುಟುಂಬಸ್ಥರು ಆಗಮಿಸಿದ್ದಾರೆ. ಎಲ್ಲರಿಗೂ ಡ್ರಿಪ್ಸ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.