ಮದುವೆ ಸಮಾರಂಭದ ಸಂಭ್ರಮ ಖುಷಿ ಒಂದು ಕ್ಷಣದಲ್ಲಿ ಮಾಯವಾದ ಘಟನೆ ಮಧ್ಯಪ್ರದೇಶ ಗುನಾದಲ್ಲಿ ನಡೆದಿದೆ. ಮದುವೆಗಾಗಿ ಆಹ್ವಾನಿತ ಆತ್ಮೀಯರು, ಕುಟುಂಸ್ಥರು, ಆಪ್ತರು ಆಗಮಿಸಿದ್ದರು. ಮತ್ತೊಂದೆಡೆ ವಿವಿದ ಬಗೆಯ ತಿನಿಸುಗಳು, ಆಹಾರ ರೆಡಿಯಾಗಿತ್ತು. ವೇದಿಕೆಯಲ್ಲಿ ನವ ಜೋಡಿಗಳು ಕುಳಿತಿದ್ದರು. ಮಂತ್ರಗಳು, ವಾದ್ಯಘೋಷಗಳು ಮೊಳಗಿತ್ತು. ಮತ್ತೊಂದೆಡೆ ಚಿಕ್ಕ ಮಕ್ಕಳು ತಮ್ಮದೇ ಸಂಭ್ರಮದಲ್ಲಿ ತೊಡಗಿದ್ದರು. ಆದರೆ ಒಂದು ಕ್ಷಣದಲ್ಲಿ ಕುಳಿತಿದ್ದ ಅತಿಥಿಗಳು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ. ನವ ಜೋಡಿಗಳಿಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಜೇನು ನೊಣಗಳು ದಾಳಿ ನಡೆಸಿತ್ತು. ಒಂದೇ ಬಾರಿ ನಡೆದ ದಾಳಿಯಲ್ಲಿ ಹಲವರು ತೀವ್ರವಾದ ಕಡಿತಕ್ಕೊಳಗಾಗಿದ್ದಾರೆ. ಕೆಲವರು ಓಡುವ ಭರದಲ್ಲಿ ಬಿದ್ದು ಗಾಯಗಳಾಗಿವೆ. 12 ಮಂದಿ ಆಸ್ಪತ್ರೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.