ಬೆಂಗಳೂರು : ಮದುವೆ ಮನೆಯಿಂದ ವ್ಯಕ್ತಿಯೋರ್ವ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಕಲಿ ಕೀ ಬಳಸಿ ಸಂಬಂಧಿಕರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ರಫೀಕ್ (35) ಬಂಧಿತ ಆರೋಪಿ.
ಬಂಧಿತನಿಂದ 1.10 ಕೋಟಿ ಮೌಲ್ಯದ 1.8 ಕೆಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಷಹನವಾಜ್ ಗುಜರಿ ವ್ಯಾಪಾರಿಯಾಗಿದ್ದು, ತಿಲಕ್ ನಗರದ ಎಸ್.ಆರ್.ಕೆ ಗಾರ್ಡನ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು.
ಷಹನವಾಜ್ ಕುಟುಂಬಕ್ಕೆ ಸಂಬಂಧಿಯಾಗಿದ್ದ ಮೊಹಮ್ಮದ್ ರಫೀಕ್ಗೆ ಆರಂಭದಿಂದಲೂ ಅವರ ಐಷಾರಾಮಿ ಜೀವನ ಶೈಲಿಯ ಬಗ್ಗೆ ಅಸೂಯೆ ಇತ್ತು.
ಆಗಾಗ ಷಹನವಾಜ್ ಮನೆಗೆ ಬಂದು ಹೋಗುತ್ತಿದ್ದ ರಫೀಕ್, ಸಂದರ್ಭವೊಂದರಲ್ಲಿ ಮನೆಯ ಕೀ ಅಚ್ಚು ಪಡೆದುಕೊಂಡು ಅದರ ನಕಲಿ ಸಿದ್ಧಪಡಿಸಿಕೊಂಡಿದ್ದ.
ಇತ್ತೀಚಿಗೆ ಷಹನವಾಜ್ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದ್ದುದರಿಂದ ಚಿನ್ನಾಭರಣ ಹಾಗೂ ನಗದು ಮನೆಯಲ್ಲಿ ತಂದಿಸಲಾಗಿತ್ತು.
ಸೆಪ್ಟೆಂಬರ್ 23ರಂದು ಸಂಬಂಧಿಕರ ಮನೆಯಲ್ಲಿ ಮದುವೆ ನಿಮಿತ್ತ ಷಹನವಾಜ್ ಕುಟುಂಬ ರಾಮನಗರಕ್ಕೆ ತೆರಳಿತ್ತು.
ಅದೇ ಸಂದರ್ಭವನ್ನು ಬಳಸಿಕೊಂಡಿದ್ದ ಆರೋಪಿ ಅವರ ಮನೆಗೆ ನುಗ್ಗಿ 2.5 ಕೆಜಿ ತೂಕದ ಚಿನ್ನಾಭರಣ, 8 ರಿಂದ 10 ಲಕ್ಷ ನಗದು ದೋಚಿ ಪರಾರಿಯಾಗಿದ್ದ.
ಸೆಪ್ಟೆಂಬರ್ 25ರ ರಾತ್ರಿ ಷಹನವಾಜ್ ಕುಟುಂಬ ಮನೆಗೆ ಮರಳಿದಾಗ ಕಳ್ಳತನದ ಕೃತ್ಯ ಬಯಲಾಗಿತ್ತು.
ತಕ್ಷಣ ಷಹನವಾಜ್ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆಗಿಳಿದಾಗ ಆರೋಪಿ ನಂಬರ್ ಪ್ಲೇಟ್ ಬದಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು.
ಅದರ ಜಾಡು ಹಿಡಿದು ಹೊರಟಾಗ ಆರೋಪಿ ಷಹನವಾಜ್ ಸಂಬಂಧಿಕನೇ ಎಂಬುದು ಬಯಲಾಗಿದೆ.
ಕದ್ದ ಹಣದಲ್ಲಿ ಬಹುಪಾಲು ದುಡ್ಡನ್ನು ಆರೋಪಿ ತನ್ನ ಸಾಲಗಳನ್ನು ತೀರಿಸಲು ಬಳಸಿಕೊಂಡಿದ್ದು, ಸದ್ಯ ಆತನಿಂದ 1.8 ಕೆ.ಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.