ಬೆಂಗಳೂರು: ಸರ್ಕಾರ ಬದಲಾದರೂ ಜನರಿಗೆ ಮಾತ್ರ ಬೆಲೆ ಏರಿಕೆ ಬರೆ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಇಂಧನ ಮತ್ತು ಹಾಲಿನ ದರ ಹೆಚ್ಚಳವಾಗಿತ್ತು. ಇದೀಗ ಬಿಯರ್ ಬೆಲೆಯಲ್ಲಿ ಏರಿಕೆಯಾಗಿದ್ದು, ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲಾಗಿದೆ. ಪ್ರತಿ ಬಾಟಲ್ಗೆ ಬರೋಬ್ಬರಿ 5 ರಿಂದ 20 ರೂಪಾಯಿವರೆಗೂ ಬೆಲೆ ಏರಿಕೆ ಮಾಡಲಾಗಿದೆ. ಕೆಲ ಮದ್ಯದ ಕಂಪನಿಗಳು ಕಳೆದ ಗುರುವಾರದಿಂದಲೇ ಬೆಲೆಗಳನ್ನು ಹೆಚ್ಚಿಸಿವೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ ಮತ್ತು ಬುಧವಾರದಿಂದ ಜಾರಿಗೆ ಬರಲಿದೆ. ಆಯಾ ಬ್ರ್ಯಾಂಡ್ಗಳಿಗೆ ತಕ್ಕಂತೆ 5 ರಿಂದ 20 ರೂಪಾಯಿವರೆಗೂ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ರಾಜ್ಯ ಸರ್ಕಾರ, ಅದಕ್ಕೆ ಹಣ ಹೊಂದಿಸುವ ಸಲುವಾಗಿ ಬಿಯರ್ ಮೇಲೆ ಶೇ. 20 ರಷ್ಟು ಸುಂಕವನ್ನು ವಿಧಿಸಿತ್ತು. ಆ ಬಳಿಕ ಅದರ ವೆಚ್ಚವನ್ನು ಸರಿದೂಗಿಸಲು ಮದ್ಯದ ಕಂಪನಿಗಳು ಪ್ರತಿ ಬಾಟಲ್ ಮೇಲೆ 10 ರೂಪಾಯಿ ಬೆಲೆ ಏರಿಕೆ ಮಾಡಿದ್ದವು. ಇದೀಗ ಸರ್ಕಾರ ಮತ್ತೊಮ್ಮೆ ತೆರಿಗೆ ಹೆಚ್ಚಳ ಮಾಡಿದ್ದು, ಮದ್ಯ ಕಂಪನಿಗಳು ಮತ್ತೆ ದರ ಏರಿಕೆ ಮಾಡಿವೆ. ಕಳೆದ 17 ತಿಂಗಳಲ್ಲಿ ಬರೋಬ್ಬರಿ 5ನೇ ಬಾರಿ ಬೆಲೆ ಏರಿಕೆಯಾಗಿದೆ.