ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯ ನಡುವಲ್ಲೇ ಜೋಹಾನ್ಸ್‌ಬರ್ಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದ್ದಾರೆ. ಭಾರತದ ಮನವಿ ಮೇರೆಗೆ ಈ ಮಾತುಕತೆ ನಡೆದಿದೆ ಎಂಬ ಚೀನಾ ಹೇಳಿಕೆಯನ್ನು ಭಾರತ ಸರ್ಕಾರ ಸಾರಾಸಗಟಾಗಿ ತಳ್ಳಿ ಹಾಕಿದೆ.
ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಆಗಸ್ಟ್ 23, 2023 ರಂದು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯ ಮೇರೆಗೆ ಮಾತುಕತೆ ನಡೆಸಿದರು ಎಂದು ಹೇಳಿತ್ತು. ಸಭೆಯಲ್ಲಿ ಜಿನ್‌ಪಿಂಗ್ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಬಗ್ಗೆ ಒತ್ತು ನೀಡಿದ್ದಾರೆ. ಶಾಂತಿ & ಅಭಿವೃದ್ಧಿಗೆ ಉತ್ತಮ ಸಂಬಂಧಗಳು ಅಗತ್ಯವಾಗಿದ್ದು, LACನಲ್ಲಿ ಶಾಂತಿ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೋದಿಗೆ ಒತ್ತಾಯಿಸಿದ್ದಾರೆ’ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿತ್ತು.
ಆದರೆ ಭಾರತೀಯ ವಿದೇಶಾಂಗ ಇಲಾಖೆ ಹೇಳಿಕೆಯನ್ನು ತಿರಸ್ಕರಿಸಿದ್ದು, ದ್ವಿಪಕ್ಷೀಯ ಸಭೆಗಾಗಿ ಚೀನಾದ ಕಡೆಯಿಂದ ವಿನಂತಿಯು ಕೂಡ ಬಾಕಿ ಉಳಿದಿದೆ ಎಂದು ತಿಳಿಸಿವೆ. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಲೀಡರ್ಸ್ ಲಾಂಜ್ನಲ್ಲಿ ಅನೌಪಚಾರಿಕ ಸಂಭಾಷಣೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಕೇವಲ ಉಭಯ ನಾಯಕರು ಲೀಡರ್ಸ್ ಲಾಂಜ್ನಲ್ಲಿ “ಅನೌಪಚಾರಿಕ ಸಂಭಾಷಣೆ” ನಡೆಸಿದ್ದಾರೆ. ಈ ಮಾತುಕತೆ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಮಾತುಕತೆ ಅಲ್ಲ ಎಂದು ಭಾರತ ಹೇಳಿದೆ.