ಮುಂಬೈ : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ (ಇಡಿ)ಕ್ರಮದ ವಿರುದ್ಧ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದಾರೆ.
ಪ್ರಕರಣದ ಅರ್ಜಿ ಯ ವಿಚಾರಣೆಯನ್ನು ನ್ಯಾ. ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.
ಬಿಟ್ಕಾಯಿನ್ ವಂಚನೆ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸೆ. 27ರಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾಗೆ ನೋಟಿಸ್ ನೀಡಿದ್ದು, ಜುಹು ಮನೆಯನ್ನು ಹಾಗೂ ಪುಣೆಯಲ್ಲಿರುವ ತೋಟದ ಮನೆಯನ್ನು ಹತ್ತು ದಿನಗಳ ಒಳಗಾಗಿ ತೆರವುಗೊಳಿಸುವಂತೆ ಸೂಚಿಸಿತ್ತು