ಸಾಮಾನ್ಯವಾಗಿ ಅಂಗಡಿಯೊಂದಕ್ಕೆ ತಿಂಗಳ ಬಾಡಿಗೆ ಎಷ್ಟಿರಬಹುದು? ಎನ್ನುವ ಪ್ರಶ್ನೆಗೆ aಸಣ್ಣ ಪೇಟೆಯಾದರೆ ಸಾವಿರ ಗಳಲ್ಲಿ ದೊಡ್ಡ ನಗರ, ಮಾಲ್ ಗಳಲ್ಲಿ ಲಕ್ಷದಲ್ಲಿರಬಹುದು ಎಂದು ಊಹಿಸಬಹುದು. ಆದರೆ ಈ ಮಳಿಗೆಯೊಂದರೆ ಬಾಡಿಗೆ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ! ಯಾವುದು ಆ ಮಳಿಗೆ? ಯಾಕಿಷ್ಟು ದುಬಾರಿ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ರಿಲಯನ್ಸ್ ಗ್ರೂಪ್ ನ ಮಾಲ್
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಭಾರತದ ಅತ್ಯಂತ ಐಷರಾಮಿ ಶಾಪಿಂಗ್ ಮಾಲ್ ಆರಂಭಿಸಲು ಸಜ್ಜಾಗಿದ್ದಾರೆ. ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ವಲಯದಲ್ಲಿ ಜಿಯೋ ವರ್ಲ್ಡ್ ಪ್ಲಾಜಾ ಹೆಸರಿನ ಈ ಶಾಪಿಂಗ್ ಮಾಲ್ ತಲೆ ಎತ್ತಲಿದ್ದು, ಇದರಲ್ಲಿನ ಮಳಿಗೆ ಇದೀಗ ದುಬಾರಿ ಬಾಡಿಗೆ ಕಾರಣದಿಂದ ಸುದ್ದಿಯಲ್ಲಿದೆ.
ಈ ಮಾಲ್ ನಲ್ಲಿ ಮಳಿಗೆ ಬಾಡಿಗೆ ತಿಂಗಳಿಗೆ ಕನಿಷ್ಠ 40 ಲಕ್ಷ ರೂ.ಯಿಂದ ಆರಂಭ. ಇದು ಐಷಾರಾಮಿ ಮತ್ತು ಎಕ್ಸ್ ಕ್ಲೂಸೀವ್ ಬ್ರ್ಯಾಂಡ್ ಗಳಿಗೆ ಮೀಸಲಾದ ಮಾಲ್.
ಈಗಾಗಲೇ ಕ್ಲೂಥ್ ಗುಕಿ, ಕಾರ್ಟಿಯರ್, ಲೂಯಿಸ್ ವಿಟ್ಟನ್, ಬರ್ಬೆರಿ, ಡಿಯೋರ್, ರಿಚಮೊಂಟ್, ಕೆರಿಂಗ್ ಮತ್ತಿತರ ಐಷಾರಾಮಿ ಬ್ರ್ಯಾಂಡ್ ಗಳು ಜಿಯೋ ವರ್ಲ್ಡ್ ಪ್ಲಾಜಾ ಜೊತೆ ಒಪ್ಪಂದ ಮಾಡಿಕೊಂಡಿವೆ. ಮಾತ್ರವಲ್ಲ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮುಖ್ಯಸ್ಥೆಯಾಗಿರುವ ರಿಲಯನ್ಸ್ ರಿಟೇಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಹಲವು ಕಂಪೆನಿಗಳೂ ಇಲ್ಲಿ ಮಳಿಗೆ ತೆರೆಯಲಿವೆ.
ಈ ಐಷಾರಾಮಿ ಶಾಪಿಂಗ್ ಮಾಲ್ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಸಾರ್ವಜನಿಕರ ಪ್ರವೇಶದ ಕುರಿತು ಇನ್ನೂ ತೀರ್ಮಾನವಾಗಿಲ್ಲ.