ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಬತ್ತನೆಯು ಸಂಪೂರ್ಣ ಕುಂಠಿತಗೊಂಡಿದೆ.
ಕೃಷಿ ಇಲಾಖೆ 82.35 ಲಕ್ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ 69.84 ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯವಾಗಿದೆ.
ಮಳೆ ಕೈಕೊಟ್ಟಿರುವ ಹಿನ್ನೆಲೆ ಈ ಬಾರಿ ಆಹಾರ ಉತ್ಪಾದನೆಯಲ್ಲಿ ತೀವ್ರ ಕೊರತೆಯಾಗುವ ಆತಂಕ ಎದುರಾಗಿದೆ. ಸಕಾಲಕ್ಕೆ ಮಳೆ ಬಾರದೇ ಕಾಳುಕಟ್ಟುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ಇಳುವರಿಯೂ ಕುಂಠಿತವಾಗುವ ಆತಂಕ ಇದೆ. ಭತ್ತ, ರಾಗಿ, ಜೋಳ, ತೊಗರಿ, ಕಡಲೆ, ಹುರುಳಿ, ಹೆಸರು, ಉದ್ದು ಸೇರಿದಂತೆ ಎಲ್ಲ ಬೆಳೆಗಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.
729 ಮಿಮೀ ವಾಡಿಕೆ ಮಳೆ ಬದಲು 547 ಮಿಮೀ ಮಾತ್ರ ಈ ಮುಂಗಾರು ಹಂಗಾಮಿನಲ್ಲಿ ಈವರೆಗೆ ಮಳೆ ಸುರಿದಿದೆ. ಪರಿಣಾಮ, 35.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಮತ್ತಿತರ ಏಕದಳ ಧಾನ್ಯಗಳನ್ನು ಬಿತ್ತುವ ಗುರಿ ಹೊಂದಿದ್ದರೂ 30.47 ಲಕ್ಷ ಹೆಕ್ಟೇರ್(ಶೇ.86)ನಲ್ಲಷ್ಟೇ ಬಿತ್ತನೆಯಾಗಿದೆ.