ಮಸೀದಿ ಮುಂದೆ ಪ್ರತಿಭಟನೆ ನಡೆಸಿ “ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ ಸಂಬಂಧ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಸುರೇಶ್ ಸೇರಿ ಐವರು ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಸದ್ಯ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಂಗಳೂರಿನ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ‘ಭಾರತ್ ಮಾತಾ ಕಿ ಜೈ’ ಘೋಷಣೆಯು ಸಾಮರಸ್ಯ ವನ್ನು ಉತ್ತೇಜಿಸುತ್ತದೆ ಹೊರತು ದ್ವೇಷ ಹರಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯವಾಗಿ ‘ಭಾರತ್ ಮಾತಾ ಕೀ ಜೈ’ ಘೋಷಣೆ ಮಾಡಿದಲ್ಲಿ ಐಪಿಸಿ ಸೆಕ್ಷನ್ 153ಎ ಆನ್ವಯವಾಗುವ ಒಂದೇ ಒಂದು ಅಂಶವಿಲ್ಲ, ಆದ್ದರಿಂದ ಇಲ್ಲಿ ಯಾವುದೇ ದ್ವೇಷ ಘರ್ಷಣೆ ನಡೆದಿಲ್ಲ, ಇದು ಐಪಿಸಿ ಸೆಕ್ಷನ್ 153 ದುರ್ಬಳಕೆಗೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಕೇವಲ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ ಹಾಗೂ ದೇಶದ ಪ್ರಧಾನ ಮಂತ್ರಿಯನ್ನು ಹೊಗಳಿದ್ದಾರೆ. ದ್ವೇಷ ಹರಡಿದ ಅಂಶವು ದೂರಿನಲ್ಲಿಯೇ ಉಲ್ಲೇಖಿಸಿಲ್ಲ. “ಭಾರತ್ ಮಾತಾ ಕೀ ಜೈ” ಘೋಷಣೆ ಕೂಗಿರುವುದು ಕೇವಲ ಸಾಮರಸ್ಯ ಉತ್ತೇಜಿಸುತ್ತದೆ ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.