ಮಹಾರಾಷ್ಟ್ರ: ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಗ್ಲೌಸ್ ತಯಾರಿಸುವ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು, ಕಾರ್ಖಾನೆಯ ಒಳಗಿದ್ದ ಆರು ಜನ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂಭಾಜಿ ನಗರದ ವಾಲುಜ್ ಎಂಐಡಿಸಿ ಪ್ರದೇಶದಲ್ಲಿರುವ ಹ್ಯಾಂಡ್ ಗ್ಲೋವ್ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ ಎಂದು ಕರೆ ಬಂದ ಹಿನ್ನಲೆ ಕೂಡಲೇ ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು. ಆದರೆ, ಅಗ್ನಿಯ ಕೆನ್ನಾಲಗೆಯು ಇಡೀ ಕಾರ್ಖಾನೆಗೆ ವ್ಯಾಪಿಸಿದ ಕಾರಣ ಬೆಂಕಿ ನಂದಿಸುವಷ್ಟರಲ್ಲಿಯೇ ಆರು ಕಾರ್ಮಿಕರು ಮೃತಪಟ್ಟಿದ್ದರು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಂಪೂರ್ಣವಾಗಿ ಅಗ್ನಿ ನಂದಿಸಿದ ಬಳಿಕವೇ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ಇಡೀ ಕಾರ್ಖಾನೆ ಸುಟ್ಟುಹೋಗಿದೆ. ಕಾರ್ಖಾನೆಯಲ್ಲಿ ಸುಮಾರು 10-15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಲೇ ಒಂದಷ್ಟು ಕಾರ್ಮಿಕರು ಹೊರಗೆ ಓಡಿದರು. ಆದರೆ, ಆರು ಕಾರ್ಮಿಕರು ಮಾತ್ರ ಅಗ್ನಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.