ದಾವಣಗೆರೆ: ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ ಸಹ ಸಂಘರ್ಷವಿಲ್ಲದೇ ಸುಲಭವಾಗಿ ಏನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ ಬಸವಣ್ಣ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕಾರ್ ತಿಳಿಸಿದರು.
ಅವರು ಮಂಗಳವಾರ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ `ಸತ್ವಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಇಂದು ಮಹಿಳೆ ಸ್ವಾವಲಂಬಿಯಾಗಿದ್ದಾಳೆ. ಮಹಿಳೆ ಮುಂದೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಸಾಕಷ್ಟು ಶ್ರಮವಹಿಸಿ ಮುಂದೆ ಬಂದರೂ ಹಿಂದೆ ತಳ್ಳುತ್ತಾರೆ. ಇದಕ್ಕೆ ಸರಿಸಮಾನರಾಗಿ ನಿಲ್ಲಬೇಕಾಗಿದೆ ಎಂದರು.
ಇಂದು ತಾಂತ್ರಿಕತೆಯಲ್ಲಿ ಸಾಕಷ್ಟು ಮುಂದೆ ಇದೆ, ಆದರೆ ಮನುಷ್ಯತ್ವ ರೂಪಿಸಲು ತಾಂತ್ರಿಕತೆಯಿಂದ ಸಾಧ್ಯವಾಗುವುದಿಲ್ಲ. ಮನುಷ್ಯತ್ವದಿಂದ ಮನುಷ್ಯರಿಗಾಗಿ ಸೇವೆ ಮಾಡುವ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಾಗಿದ್ದು ಇಲ್ಲಿ ಮಗು ಗರ್ಭಾವಸ್ಥೆಯಿಂದ ಜನನವಾಗಿ ಬೆಳೆದು ಮರಣ ಹೊಂದುವವರೆಗೂ ಇಲಾಖೆ ಸೇವೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮದ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.