ಬೆಳಗಾವಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದ ಆರೋಪಿಗಳು ಇದೀಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಬೆಳಗಾವಿಯ ವಂಟಮೂರಿನಲ್ಲಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿತ್ತು. ಬಳಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ನಡೆದ ನಾಲ್ಕು ತಿಂಗಳ ಬಳಿಕ ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಅವರಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವಂತಹ ಹೀನ ಕೃತ್ಯ ಎಸಗಿರುವ ಆರೋಪಿಗಳಿಗೆ ಇಂತಹ ಸ್ವಾಗತ ಅಗತ್ಯವಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಜೈಲಿನ ಎದುರೇ ಪ್ರಮುಖ ಆರೋಪಿ ಬಸಪ್ಪ ನಾಯ್ಕ್‌ಗೆ ಹೂಮಾಲೆ ಹಾಕಿ, ಸಿಹಿ ತಿನಿಸಿ ಸ್ವಾಗತ ಮಾಡಲಾಯಿತು. ಜೊತೆಗೆ ಆರೋಪಿಗಳನ್ನು ವಂಟಮೂರಿನಲ್ಲಿ ಮೆರವಣಿಗೆ ಮಾಡಲು ಆರೋಪಿಯ ಬೆಂಬಲಿಗರು ಮುಂದಾಗಿದ್ದರು. ಆದರೆ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಮೆರವಣಿಗೆ ಕೈ ಬಿಟ್ಟು ಪಟಾಕಿ ಸಿಡಿಸಿ ಆರೋಪಿಗಳ ಬೆಂಬಲಿಗರು ಸಂಭ್ರಮಿಸಿದ್ದಾರೆ.