ಕಾಸರಗೋಡು: ಧರಿಸಿರುವ ಸ್ಯಾನಿಟರಿ ಪ್ಯಾಡ್‌ನೊಳಗಡೆ ಡೆತ್‌ನೋಟ್ ಬಚ್ಚಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡಿನ ಬೋವಿಕ್ಕಾನದ ಪೊವ್ವಲ್ ಬೆಂಚುಕೋರ್ಟುವಿನಲ್ಲಿ ನಡೆದಿದೆ.
ಈ ಡೆತ್‌ನೋಟ್‌ನಲ್ಲಿ ಪತಿಯ ಕಿರುಕುಳದ ಕರಾಳತೆ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಜಾಫರ್ ಎಂಬಾತನ ಪತ್ನಿ, ಮೂಲತಃ ಸುಳ್ಯ ಗಾಂಧಿನಗರದ ಅಲೀಮಾ ಅಲಿಯಾಸ್ ಶೈಮ (35) ಎಂಬಾಕೆಯ ಆತ್ಮಹತ್ಯೆ ದೌರ್ಜನ್ಯದ ಕರ್ಣಕಠೋರ ಕತೆಗಳನ್ನು ತೆರೆದಿಟ್ಟಿದೆ. ಐದು ಮಕ್ಕಳತಾಯಿ ಅಲೀಮಾ ಮನೆಯ ಬಚ್ಚಲು ಮನೆಯಲಯ ನೇಣುಬಿಗಿದು ಆತ್ಮಹತ್ಯೆ ಮಾಡಿದ್ದಳು. ಪತ್ನಿ ಆತ್ಮಹತ್ಯೆಗೈದ ಬೆನ್ನಲ್ಲೇ ಪತಿ ಜಾಫರ್ ರಾತ್ರಿಯೇ ಮನೆ, ಊರು ಬಿಟ್ಟು ತಲೆಮರೆಸಿಕೊಂಡಿದ್ದಾನೆ. ದಂಪತಿ ನಡುವೆ ಜಗಳ ಏರ್ಪಟ್ಟಿತ್ತೆಂದೂ, ಪತಿಯ ಸಂಶಯದ ರೋಗವನ್ನು ಸಹಿಸಲಾಗದೇ, ತಾನು ಅನುಭವಿಸಿದ ದೌರ್ಜನ್ಯದ ಅನುಭವಗಳನ್ನು ಎಳೆಎಳೆಯಾಗೊ ಬಿಚ್ಚಿಟ್ಟು ತನಗೆ ಆತ್ಮಹತ್ಯೆಯಲ್ಲದೇ ಅನ್ಯದಾರಿಯಿಲ್ಲ ಎಂದು ಬರೆದಿದ್ದಾರೆ. ಈ ಡೆತ್‌ನೋಟ್ ಅನ್ನು ತಾನು ಧರಿಸಿರುವ ಪ್ಯಾಡ್‌ನೊಳಗಿಟ್ಟು ಅಲೀಮಾ ಆತ್ಮಹತ್ಯೆ ಮಾಡಿದ್ದಾರೆ.
ವಿಪರೀತ ಸಂಶಯ ರೋಗಿಯಾದ ಪತಿ, ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ದೈಹಿಕ ಹಲ್ಲೆ, ದೌರ್ಜನ್ಯ ನಡೆಸಿದ್ದ. ತನ್ನ ಮೊಬೈಲ್ ಕಿತ್ತುಕೊಂಡು, ಯಾರೊಂದಿಗೂ ಸಂಪರ್ಕವೇ ಇಲ್ಲದಂತೆ ಮಾಡಿದ್ದ. ತನ್ನನ್ನು ಬೆತ್ತಲು ಮಾಡಿ ಹಲ್ಲೆಗೈದು ಹೆಣ್ಣೊಬ್ಬಳಿಗೆ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆಂದು ಆಕೆ ಪತ್ರದಲ್ಲಿ ವಿವರಿಸಿದ್ದಾರೆ. ಲೈಂಗಿಕ ದೌರ್ಜನ್ಯವನ್ನೂ ಮಾಡುತ್ತಿದ್ದ ಪತ್ರದಲ್ಲಿ ಉಲ್ಲೇಖಿಸುತ್ತಿದ್ದ. ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ಆಕೆ ಬರೆದಿಟ್ಟ ಪತ್ರ ಗುಪ್ತಾಂಗ ಭಾಗದಲ್ಲಿ ಪತ್ತೆಯಾಗಿದೆ.
ನಾಪತ್ತೆಯಾದ ಜಾಫರ್ ಇನ್ನೂ ಪತ್ತೆಯಾಗಿಲ್ಲ. ಮೃತ ಮಹಿಳೆ ಬರೆದಿಟ್ಟ ಪತ್ರ ಸಿಕ್ಕಿದ ಮೇಲೂ ಪ್ರಕರಣ ದಾಖಲಿಸಿರುವ ಪೊಲೀಸರು ಜಾಫರ್ ವಿರುದ್ಧ ಆತ್ಮಹತ್ಯಾ ಪ್ರೇರಣೆ, ನಿರಂತರ ದೌರ್ಜನ್ಯ, ನೈತಿಕ ಸಂಶಯದ ಕೇಸ್ ದಾಖಲಿಸಿಲ್ಲ ಎಂದು ಆರೋಪಿಸಿ ಸುಳ್ಯ ಗಾಂಧಿನಗರ ಮೂಲದ ಮಹಿಳೆ ಕುಟುಂಬದವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾನವ ಹಕ್ಕು ಆಯೋಗಕ್ಕೆ ದೂರಿದ್ದಾರೆ.