ಚೀನಾದಲ್ಲಿ ವೈದ್ಯರು ಮಹಿಳೆಯೊಬ್ಬರ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳುಗಳನ್ನು ಹೊರ ತೆಗೆದಿದ್ದಾರೆ. ಚೀನಾದ ಕುನ್ಮಿಂಗ್ ಪ್ರಾಂತ್ಯದ ಮಹಿಳೆ ಕಣ್ಣಿನ ನೋವನ್ನು ಅನುಭವಿಸುತ್ತಿದ್ದರು. ಆದರೆ, ಈ ನೋವು ಆಯಾಸದ ಕಾರಣದಿಂದ ಬರುತ್ತಿರಬಹುದು ಎಂದು ಇವರು ನಿರ್ಲಕ್ಷಿಸಿದ್ದರು. ಆದರೆ, ಯಾವಾಗ ಅವಳ ಕಣ್ಣಿಂದ ಒಂದು ಹುಳು ಬಿತ್ತೊ ಅವರು ವೈದ್ಯರನ್ನು ಸಂಪರ್ಕಿಸಿದ್ದರು. ಆಕೆಯ ಬಲಗಣ್ಣಿನಲ್ಲಿ ನಲವತ್ತು ಮತ್ತು ಎಡಗಣ್ಣಿನಲ್ಲಿ ಹತ್ತಕ್ಕೂ ಹೆಚ್ಚು ಹುಳುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಆಕೆಯ ಕಣ್ಣುರೆಪ್ಪೆಗಳು ಮತ್ತು ಕಣ್ಣುಗುಡ್ಡೆಗಳ ನಡುವಿನ ಜಾಗದಲ್ಲಿ ಈ ಹುಳುಗಳು ತೆವಳುತ್ತಿರುವುದನ್ನು ಕಂಡ ವೈದ್ಯರೇ ಶಾಕ್ ಆಗಿದ್ದಾರೆ. ಈ ಲಾರ್ವಾಗಳು ಹುಳುಗಳಾಗಿ ಬೆಳೆಯಲು ಸುಮಾರು 15ರಿಂದ 20 ದಿನಗಳು ಬೇಕಾಗುತ್ತದೆ. ಈ ಪರಾವಲಂಬಿ ಹುಳುಗಳು ಸಾಮಾನ್ಯವಾಗಿ ನಾಯಿಗಳು, ಬೆಕ್ಕುಗಳು ಮತ್ತು ಇತರ ಪ್ರಾಣಿಗಳ ಕಣ್ಣಿನ ಭಾಗಗಳಲ್ಲಿ ಇರುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಸಾಕುಪ್ರಾಣಿಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಿ. ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬಂದರೂ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಎಂದೂ ಸಲಹೆ ನೀಡಿದ್ದಾರೆ.