ಪುಣೆ : ಉತ್ತರ ಕನ್ನಡ ಮೂಲದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ನಟ ಸಲೀಲ್ ಅಂಕೋಲಾ ಅವರ ತಾಯಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪುಣೆಯ ಫ್ಲ್ಯಾಟ್ ನಲ್ಲಿ ಅ.04ರಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸಲೀಲ್ ಅಂಕೋಲಾ ಅವರ ತಾಯಿ ಮಾಲಾ ಅಶೋಕ್ ಅಂಕೋಲಾ (77ವರ್ಷ) ಅವರ ಮೃತದೇಹವು ಡೆಕ್ಕನ್ ಜಿಮ್ಕಾನಾ ಪ್ರದೇಶದ ಪ್ರಭಾತ್ ರಸ್ತೆಯಲ್ಲಿರುವ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ.
ಶುಕ್ರವಾರ ಮಧ್ಯಾಹ್ನ ಮನೆಕೆಲಸದಾಕೆ ಮನೆಗೆ ಬಂದು ಬಾಗಿಲಿನ ಬೆಲ್ ಮಾಡಿದರೂ ಮಾಲಾ ಅಶೋಕ್ ಅವರಿಂದ ಯಾವ ಪ್ರತಿಕ್ರಿಯೆ ಬಾರದಿದ್ದಾಗ, ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಾಗಿಲು ತೆರೆದು ನೋಡಿದಾಗ ಗಂಟಲು ಸೀಳಿದ ಸ್ಥಿತಿಯಲ್ಲಿ ಮಾಲಾ ಅವರ ಮೃತದೇಹ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ.
ಮೇಲ್ನೋಟಕ್ಕೆ ಇದು ಸ್ವಯಂ ಆಗಿ ಗಂಟಲು ಸೀಳಿಕೊಂಡಂತಿದೆ. ಆದರೆ ನಾವು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ. ಮಾಲಾ ಅಂಕೋಲಾ ಅವರು ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಲೀಲ್ ಅಂಕೋಲಾ ಅವರು 1989 ರಿಂದ 1997ರವರೆಗೆ ಒಂದು ಟೆಸ್ಟ್ ಹಾಗೂ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಜೊತೆಗೆ ಕೆಲವು ಸಿನಿಮಾ ಹಾಗೂ ಧಾರವಾಹಿಗಳಲ್ಲೂ ನಟಿಸಿದ್ದರು.