ಮಾಧ್ಯಮಗಳು ಯಾರನ್ನೋ ತೇಜೋವಧೆ ಮಾಡುವುದು ಸರಿ ಇಲ್ಲ.! ಡಾ.ಪಂಡಿತಾರಾಧ್ಯ ಶ್ರೀ

ಚಿತ್ರದುರ್ಗ : ಮಾಧ್ಯಮಗಳು ಯಾರನ್ನೋ ತೇಜೋವಧೆ ಮಾಡುವುದಾಗಲಿ, ಎತ್ತಿಕಟ್ಟುವುದಾಗಲಿ ಮಾಡಿದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಬಿಸಿ ಸುದ್ದಿಗೆ ಹತ್ತು ವರ್ಷದ ಸಂಭ್ರಮಕ್ಕಾಗಿ ಶನಿವಾರ ವಿಚಾರ ಸಂಕಿರಣ ಹಾಗೂ ಬಿಸಿ ಸುದ್ದಿ ಕಚೇರಿ ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮಿಗಳು ಮಾಧ್ಯಮಗಳು ಕಂದಕ ಮುಚ್ಚುವ ಕೆಲಸ ಮಾಡಬೇಕೆ ವಿನಃ ಮತ್ತಷ್ಟು ಆತಂಕ ಸೃಷ್ಟಿಸಬಾರದು. ಮಾಧ್ಯಮಗಳ ಮೇಲೆ ಜವಾಬ್ದಾರಿ ಜಾಸ್ತಿಯಿರುವುದರಿಂದ ಜನರ ಭಾವನೆಗಳಿಗೆ ಧಕ್ಕೆ ತರಬಾರದು. ಸತ್ಯವನ್ನು ಪ್ರತಿಪಾದಿಸಬೇಕು. ಒಳ್ಳೆ ಕಾರ್ಯದಲ್ಲಿ ತೊಡಗಿದರೆ ಹಣ ಕೀರ್ತಿ ತನ್ನಷ್ಟಕ್ಕೆ ತಾನೆ ಬರುತ್ತದೆ. ಅಚ್ಚುಕಟ್ಟಾಗಿ ಮಾಧ್ಯಮ ಕೆಲಸ ನಿರ್ವಹಿಸಿದರೆ ಜನರ ಮೆಚ್ಚುಗೆ ಗಳಿಸಬಹುದು. ಸ್ವಲ್ಪ ಹಣ ಕೀರ್ತಿ ಬಂದ ಕೂಡಲೆ ಮನುಷ್ಯ ಅಹಂಕಾರಿಯಾಗುತ್ತಾನೆ. ಹೋರಾಟವೇ ನಿಜವಾದ ಬದುಕು. ಸತ್ಯ, ಸಮಾಜ, ನ್ಯಾಯದ ಪರವಾಗಿ ಹೋರಾಟವಿರಬೇಕು. ಆದರೆ ಇಂದು ವ್ಯಕ್ತಿಯ ಪರವಾಗಿರುವುದು ದುರಂತ ಎಂದು ವಿಷಾಧಿಸಿದರು.

ಮಾಧ್ಯಮಗಳಿಗೆ ಆರಂಭದಲ್ಲಿ ಆತಂಕ, ಆರ್ಥಿಕ ನಷ್ಟವಾಗಬಹುದು. ಯಶಸ್ಸು ಸಕಾರಾತ್ಮಕವಾಗಿರಬೇಕು ಎಂದು ತಿಳಿಸಿದರು.

Advertisement

ಮುದ್ರಣ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಸಮಾಜಮುಖಿ ಚಿಂತನೆ ಮತ್ತು ಅಪಾಯ ಎಂಬ ವಿಷಯ ಕುರಿತು ಮಾತನಾಡಿದ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್ ಸತ್ಯ ನಿಷ್ಟೆಯನ್ನು ಮರೆತಿರುವ ಮಾಧ್ಯಮಗಳು ಲಾಭವನ್ನೇ ಪ್ರಧಾನವನ್ನಾಗಿಸಿಕೊಂಡಿವೆ. ಅಡ್ಡ ಪ್ರವೃತ್ತಿಯಿಂದ ಮೌಲ್ಯ, ಸತ್ಯ, ಸಿದ್ದಾಂತಗಳು ಮರೆಯಾಗುತ್ತಿವೆ. ಮುದ್ರಣ ಮಾಧ್ಯಮದಲ್ಲಿ ಪತ್ರಿಕೆ ನಡೆಸುವುದು ಕಷ್ಟ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಚಳ್ಳಕೆರೆ ಬಸವರಾಜ್ ಕಳೆದ ಹತ್ತು ವರ್ಷಗಳಿಂದ ಬಿಸಿ ಸುದ್ದಿಯನ್ನು ವೆಬ್‍ನಲ್ಲಿ ಮುನ್ನಡೆಸಿಕೊಂಡು ಬರುತ್ತಿರುವುದನ್ನು ಗುರುತಿಸಿ ಗೂಗಲ್ ಬೆಂಬಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಪಿ.ಲಂಕೇಶ್‍ರವರ ಬರವಣಿಗೆಯಲ್ಲಿ ಮೌಲ್ಯವಿದ್ದುದರಿಂದ ಆತ್ಮತೃಪ್ತಿಪಟ್ಟುಕೊಂಡಿದ್ದರು. ಅಡ್ಡ ಮಾರ್ಗದಲ್ಲಿ ಯಶಸ್ಸು ಗಳಿಸುವುದು ತುಂಬಾ ಸುಲಭ. ಆದರೆ ಅದು ಬಹಳ ಕಾಲ ಉಳಿಯುವುದಿಲ್ಲ. ರಾಜಕಾರಣಿಗಳಿಗೆ ಅಧಿಕಾರದ ಆಸೆ, ವ್ಯಾಪಾರಸ್ಥರಿಗೆ ಹಣ ಮಾಡಬೇಕೆಂಬ ಆಸೆ, ವೈದ್ಯರು, ಪತ್ರಕರ್ತರು, ಉಪಾಧ್ಯಾಯರು, ಶಿಕ್ಷಕರುಗಳಿಂದ ತಪ್ಪಾದರೆ ಸಮಾಜಕ್ಕೆ ದೊಡ್ಡ ಕಂಟಕ. ಹಣ ಮಾಡಲು ಪತ್ರಿಕೋದ್ಯಮ ದಾರಿಯಲ್ಲ. ಪತ್ರಕರ್ತನಾದವನು ಸಮಾಜಕ್ಕೆ ವಿದ್ಯೆ ಕಲಿಸುವ ಗುರುವಿದ್ದಂತೆ. ಚಳ್ಳಕೆರೆ ಬಸವರಾಜ್ ತನ್ನ ವೃತ್ತಿ ಕಷ್ಟವೋ-ಸುಖವೋ ಯಾರ ಮುಲಾಜಿಗೂ ಒಳಗಾಗದೆ ಪಾವಿತ್ರತೆಯನ್ನು ಕಾಪಾಡಿಕೊಂಡು ಬಂದಿರುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದು ಹೆಮ್ಮೆಯಿಂದ ನುಡಿದರು.
ನಯ, ವಿನಯದ ಮೋಸ ವಂಚನೆಗಿಂತ ಸತ್ಯ ಹೇಳುವಂತ ಮಾಧ್ಯಮಗಳು ಇಂದಿನ ಸಮಾಜಕ್ಕೆ ಅತ್ಯವಶ್ಯಕ ಎಂದು ಹೇಳಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಫಾಸ್ಟಾಗಿ ಸುದ್ದಿ ನೀಡುವ ತವಕದಲ್ಲಿ ಸಮಾಜಕ್ಕೆ ಅನಾಹುತ ಉಂಟು ಮಾಡಬಾರದು. ಮಾಧ್ಯಮಗಳು ಸಮಾಜಕ್ಕೆ ತಪ್ಪು ಸಂದೇಶ ನೀಡಿದರೆ ಅದನ್ನು ಸರಿಪಡಿಸುವುದು ಕಷ್ಟ. ಚಳ್ಳಕೆರೆ ಬಸವರಾಜ್ ಹತ್ತು ವರ್ಷಗಳಿಂದ ಬಿಸಿ ಸುದ್ದಿ ವೆಬ್‍ಸೈಟ್ ನಡೆಸಿಕೊಂಡು ಬರುತ್ತಿರುವುದನ್ನು ಗುರುತಿಸಿ ಗೂಗಲ್ ಬೆಂಬಲಿಸುತ್ತಿರುವುದು ನಿಜಕ್ಕೂ ಅವರ ಶ್ರಮಕ್ಕೆ ಸಿಕ್ಕ ಗೌರವ ಎಂದು ಗುಣಗಾನ ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡುತ್ತ ಮಧ್ಯ ಕರ್ನಾಟಕದ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಿಸಿ ಸುದ್ದಿ ಬೆಳಕು ಚೆಲ್ಲಬೇಕು. ಹತ್ತು ವರ್ಷಗಳನ್ನು ಸವೆಸಿರುವ ಬಿಸಿ ಸುದ್ದಿ ಮುಂದೆ ಯಶಸ್ಸಿನ ಹಾದಿಯಲ್ಲಿ ಸಾಗಲಿ. ಎರಡನೆ ಅತಿ ಹೆಚ್ಚು ಪವನ ಶಕ್ತಿಯಿರುವುದು ಏಷ್ಯಾ ಖಂಡದಲ್ಲಿಯೇ ಚಿತ್ರದುರ್ಗ ಎರಡನೆ ಸ್ಥಾನದಲ್ಲಿದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗೆಯೆ ಚಿತ್ರದುರ್ಗದಲ್ಲಿನ ಐತಿಹಾಸಿಕ ಸ್ಥಳಗಳು, ಖನಿಜ ಸಂಪತ್ತು, ಪರಿಸರ ಇವುಗಳನ್ನೆಲ್ಲಾ ವೆಬ್ ಮೂಲಕ ಎಲ್ಲಾ
ಕಡೆ ಹರಡಲಿ ಎಂದು ಚಳ್ಳಕೆರೆ ಬಸವರಾಜ್‍ಗೆ ಸಲಹೆ ನೀಡಿದರು.
ಯುವ ನ್ಯಾಯವಾದಿ ಓ. ಪ್ರತಾಪ್‍ಜೋಗಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಹೆಚ್.ಅಂಜಿನಪ್ಪ ವೇದಿಕೆಯಲ್ಲಿದ್ದರು.
ಬಿಸಿ ಸುದ್ದಿ ಸಂಪಾದಕ ಚಳ್ಳಕೆರೆ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಳ್ಳಕೆರೆ ಬಸವರಾಜ್‍ರವರ ಗೆಳೆಯರು, ಅಭಿಮಾನಿಗಳು, ಕುಟುಂಬದವರು ಈ ಸಂದರ್ಭದಲ್ಲಿ ಹಾಜರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement