ನವದೆಹಲಿ: ಮಾನನಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಕ್ಷಮೆ ಕೇಳಬೇಕು ಎಂದು ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸುಪ್ರೀಂಕೋರ್ಟ್ ನಲ್ಲಿ ಬಿಗಿಪಟ್ಟು ಹಿಡಿದಿದ್ದಾರೆ.
ಡಿ.ರೂಪಾ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆ ಸಂಬಂಧಪಟ್ಟಂತೆ ವಾದ ಮಂಡಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ಮಾನಹಾನಿಯಾಗುವ ರೀತಿಯಲ್ಲಿ ಪೋಸ್ಟ್ ಗಳನ್ನು ಮಾಡಲಾಗಿದೆ ಈ ಹಿನ್ನಲೆಯಲ್ಲಿ ಡಿ.ರೂಪಾ ಬೇಷರತ್ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಆರೋಪ ಮಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಂಧೂರಿ ಪರ ವಕೀಲರು, ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೊಸ್ಟ್ ಮಾಡುತ್ತಾರೆ. ಆದರೆ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಹೇಳಿಲ್ಲ.
ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಡಿಲೀಟ್ ಮಾಡಬಹುದು. ಆದರೆ ಇಂತಹ ಪೋಸ್ಟ್ ಗಳಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ, ನಾನು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಐಪಿಎಸ್ ಡಿ.ರೂಪಾ ಬೇಷರತ್ ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಮಧ್ಯಪ್ರವೇಶ ಮಾಡಿದ ನ್ಯಾಯಮೂರ್ತಿಎ.ಎಸ್ ಓಕಾ, ಒಂದು ತಿಂಗಳ ಸಮಯ ನೀಡಲಾಗುವುದು, ಫೆ.16ಕ್ಕೆ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಅಲ್ಲಿಯ ತನಕ ಮಧ್ಯಂತರ ಆದೇಶ ಮುಂದುವರಿಯಲಿದೆ.