ಪುಣೆ : ಮಹಾರಾಷ್ಟ್ರದ ಪ್ರಮುಖ ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್ನ ಸಮೋಸಾದಲ್ಲಿ ಗುಟ್ಕಾ ಮತ್ತು ಕಾಂಡೋಮ್ಗಳು ಪತ್ತೆಯಾಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಈ ಘಟನೆ ಪುಣೆಯ ಪಿಂಪರಿ ಚಿಂಚವಾಡದಲ್ಲಿ ನಡೆದಿದೆ. ಆರೋಪಿಗಳಾದ ರಹೀಮ್ ಶೇಖ್, ಅಝ್ಹಾರ್ ಶೇಖ್, ಮಾಸರ್ ಶೇಖ್, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂಬುವರ ವಿರುದ್ಧ ದೂರು ದಾಖಲಿಸಲಾಗಿದೆ. ಕ್ಯಾಟಲಿಸ್ಟ್ ಸರ್ವೀಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್‌ಗೆ ತಿಂಡಿಗಳನ್ನು ಪೂರೈಸುತ್ತಿತ್ತು. ಆದರೆ ಕ್ಯಾಟಲಿಸ್ಟ್ ಕಂಪನಿಯು ಇತ್ತೀಚೆಗೆ ಸಮೋಸಾಗಳನ್ನು ಪೂರೈಸುವ ಗುತ್ತಿಗೆಯನ್ನು ಮನೋಹರ್ ಎಂಟರ್‌ಪ್ರೈಸಸ್ ಎಂಬ ಮತ್ತೊಂದು ಉಪ ಗುತ್ತಿಗೆ ಸಂಸ್ಥೆಗೆ ನೀಡಿತ್ತು. ಕ್ಯಾಂಟೀನ್‌ನಲ್ಲಿ ನೀಡಿದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿದೆ. ಈ ಸಂಬಂಧ ಆಟೊಮೊಬೈಲ್ ಕಂಪನಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಮನೋಹರ್ ಸಂಸ್ಥೆಯ ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ತುಂಬಿರುವುದನ್ನು ಪೊಲೀಸರ ಮುಂದೆ ತನಿಖೆ ವೇಳೆ ಸತ್ಯ ಒಪ್ಪಿಕೊಂಡಿದ್ದಾರೆ. ಮನೋಹರ್ ಎಂಟರ್‌ಪ್ರೈಸಸ್ ಮಾನಹಾನಿ ಮಾಡಲು ಆಹಾರದಲ್ಲಿ ಈ ರೀತಿ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ತಿಂಡಿ ವಿತರಿಸುತ್ತಿದ್ದ ಮತ್ತೊಂದು ಕಂಪನಿ ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಉದ್ಯೋಗಿಗಳಾಗಿರುವುದು ಕಂಡುಬಂದಿದೆ. ಆಹಾರದಲ್ಲಿ ಕಲಬೆರಕೆ ಮಾಡಿದವರು ಮತ್ತು ಆ ರೀತಿ ಮಾಡಲು ಕುಮ್ಮಕ್ಕು ನೀಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.