ನವದೆಹಲಿ: ಭಾರತ-ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಲಕ್ಷದ್ವೀಪದಲ್ಲಿ ನಿರ್ಲವಣೀಕರಣ(ನೀರಿನಿಂದ ಉಪ್ಪನ್ನು ಬೇರ್ಪಡಿಸುವ ಪ್ರಕ್ರಿಯೆ) ಕಾರ್ಯವನ್ನು ಆರಂಭಿಸುವುದಾಗಿ ಇಸ್ರೇಲ್ ಘೋಷಿಸಿದೆ.
ಕೇಂದ್ರ ಸರ್ಕಾರದ ಕೋರಿಕೆಯ ಮೆರೆಗೆ ನಿರ್ಲವಣೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ನಾವು ಕಳೆದ ವರ್ಷ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೆವು. ನಾಳೆಯಿಂದಲೇ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಇಸ್ರೇಲ್ ತಯಾರಾಗಿದೆ ಎಂದು #ExploreIndianIslands ಎಂಬ ಹ್ಯಾಶ್ ಟ್ಯಾಗ್ ಬಳಸಿ ಭಾರತದಲ್ಲಿನ ಇಸ್ರೇಲ್ ರಾಜತಾಂತ್ರಿಕ ಕಚೇರಿಯು ಪೋಸ್ಟ್ ಮಾಡಿದೆ.
ಲಕ್ಷದ್ವೀಪದಲ್ಲಿರುವ ಹಳೆಯ ಭಾರತೀಯ ಕಡಲತೀರಗಳ ಫೋಟೋಗಳನ್ನು ಹಂಚಿಕೊಂಡಿರುವ ರಾಯಭಾರ ಕಚೇರಿಯು ಲಕ್ಷದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ಇನ್ನೂ ವೀಕ್ಷಿಸಲು ಸಾಧ್ಯವಾಗದವರಿಗೆ ಈ ದ್ವೀಪದ ಮೋಡಿಮಾಡುವ ಆಕರ್ಷಣೆಯನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ ಎಂದು ಬರೆದುಕೊಂಡಿದೆ.
ಇನ್ನು ಮಾಲ್ಡೀವ್ಸ್ ನ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆಯ ಉಪ ಸಚಿವ ಮರಿಯಾಂ ಶಿಯುನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಕೈಗೊಂಬೆ ಎಂದು ಅಣಕಿಸಿ, ನಂತರ ಆ ಪೋಸ್ಟನ್ನು ಅಳಿಸಿ ಹಾಕಿದ್ದರು.