ನವದೆಹಲಿ: ಮಹಿಳಾ ಉದ್ಯೋಗಿಗಳಿಗೆ ಮಾಸಿಕ ರಜೆ ನೀಡುವ ಪ್ರಸ್ತಾವನೆ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆಗೆ ಆಂಧ್ರಪ್ರದೇಶದ ಶಾಸಕಿ ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಜ್ಯಸಭೆಯಲ್ಲಿ ಮಾಸಿಕ ರಜೆಯ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಒಬ್ಬ ಮಹಿಳೆಯಾಗಿ ಆಕೆ ಇಂತಹ ಟೀಕೆಗಳನ್ನು ಮಾಡುವುದು ಸೂಕ್ತವಲ್ಲ ಎಂದು ಕವಿತಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಮಹಿಳೆಯರ ಅನುಭವಗಳ ಬಗ್ಗೆ ಸಚಿವೆಯಿಂದ ಸಹಾನುಭೂತಿಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಋುತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುತ್ತಿರುವ ನೋವನ್ನು ಗಮನಿಸಿ ರಜೆ ಮಂಜೂರು ಮಾಡಬೇಕೆಂಬ ಮನವಿಯನ್ನು ಸ್ಮೃತಿ ಇರಾನಿ ತಿರಸ್ಕರಿಸಿರುವುದು ಬೇಸರದ ವಿಚಾರ.
ಒಬ್ಬ ಮಹಿಳೆಯಾಗಿ, ಮಹಿಳೆಯರ ಸಂಕಟದ ಬಗ್ಗೆ ಇಂತಹ ಅಸಡ್ಡೆ ತೋರುವುದನ್ನು ನೋವುಂಟು ಮಾಡಿದೆ. ಮುಟ್ಟು ನಮ್ಮ ಆಯ್ಕೆಯಲ್ಲ. ಇದು ನೈಸರ್ಗಿಕ ಜೈವಿಕ ಪ್ರಕ್ರಿಯೆ. ವೇತನ ಸಹಿತ ರಜೆ ನಿರಾಕರಿಸುವುದು ಅಸಂಖ್ಯಾತ ಮಹಿಳೆಯರ ಸಂಕಷ್ಟವನ್ನು ನಿರ್ಲಕ್ಷಿಸಿದಂತೆ ಎಂದು ಕವಿತಾ ಎಕ್ಸ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.